ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಕುಮ್ರಗೋಡುವಿನಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಮನೆಯ ಪಾಗರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನವೆಂಬರ್ 16ರಂದು ಬೆಳಗ್ಗೆ ಸಂಭವಿಸಿದೆ.
ನವೆಂಬರ್ 16ರಂದು ಬೆಳಿಗ್ಗೆ ಸುಮಾರು 6:15ರ ವೇಳೆಗೆ ನಯಾಜ್ ಎಂಬವರು ಮಾರುತಿ ಸ್ವಿಫ್ಟ್ ಕಾರನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಕುಮ್ರಗೋಡುವಿನ ಏಕಮುಖ ರಸ್ತೆಯಲ್ಲಿ ಚಲಾಯಿಸುತ್ತಿದ್ದರು. ಈ ವೇಳೆ ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮನೆಯೊಂದರ ಪಾಗರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಶೇಖ್ ವಾಜಿದ್ ಮಿರ್ಜಾ (73) ಹಾಗೂ ತೌಫಿಕ್ ಅವರಿಗೆ ಮೈ, ಕೈ, ಕಾಲು, ತಲೆ ಮತ್ತು ಕಣ್ಣಿನ ಭಾಗಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ತಲೆಗೆ ಗಂಭೀರ ಗಾಯಗೊಂಡಿದ್ದ ಶೇಖ್ ವಾಜಿದ್ ಮಿರ್ಜಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಕಾರಿನಲ್ಲಿದ್ದ ನಬಾನ್ ಹಾಗೂ ಚಾಲಕ ನಯಾಜ್ ಅವರಿಗೆ ಯಾವುದೇ ಹೆಚ್ಚಿನ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತು ಕೊಳಂಬೆ ಹೆರೂರು ಗ್ರಾಮದ ಮಿಜ್ಬಾನ್ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಪರಾಧ ಪ್ರಕರಣ ದಾಖಲಾಗಿದೆ.


