ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಬಜಪೆ ಸಮೀಪ ಕಳೆದ ತಿಂಗಳಿನಿಂದ ನಾಪತ್ತೆಯಾಗಿದ್ದ ಯುವಕ ಮನೀಶ್ ಶರ್ಮಾ (25) ಅವರ ಅಸ್ಥಿಪಂಜರ ಹಳೆ ಏರ್ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಸ್ನೇಹಿತ ಶ್ರವಣ್ನಿಂದಲೇ ಕೊಲೆ ಮಾಡಲಾಗಿದೆ ಎಂಬ ಶಂಕೆಯ ಮೇಲೆ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರು ಸೋನು ಶರ್ಮಾ, ಮೂಲತಃ ಉತ್ತರ ಪ್ರದೇಶದವರು ಎಂದು ತಿಳಿಯಲಾಗಿದೆ.
ಮನೀಶ್ ಶರ್ಮಾ ಬಜಪೆಯ ಏರ್ಪೋರ್ಟ್ನಲ್ಲಿ ಸೋಮಸುಂದರ್ ಎಂಬವರ ಬಳಿ ಹಿಟಾಚಿ ಚಾಲಕನಾಗಿ ಕಳೆದ ಸುಮಾರು 2 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದರು.
ಅ.27 ರಂದು ಸೋನು ಶರ್ಮಾ ಅವರು ಹಲವಾರು ಬಾರಿ ತಮ್ಮನಿಗೆ ದೂರವಾಣಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅದೇ ದಿನ ಸಂಜೆ ಸೋಮಸುಂದರ್ ಅವರು ಕರೆ ಮಾಡಿ, “ನಿಮ್ಮ ತಮ್ಮ ಮನೀಶ್ ಶರ್ಮಾ ಇವತ್ತು ಕೆಲಸ ಮಾಡಿ ಸಂಜೆ ಶ್ರವಣ್ ಎಂಬಾತನ ಜೊತೆ ಹೊರಗಡೆ ಹೋದವನು ಇದುವರೆಗೂ ವಾಪಾಸು ಆಗಿಲ್ಲ, ಫೋನ್ಗೆ ಸಿಗುತ್ತಿಲ್ಲ” ಎಂದು ತಿಳಿಸಿದ್ದರು.
ಗಾಬರಿಗೊಂಡ ಸೋನು ಶರ್ಮಾ ಅ.30 ರಂದು ಬೆಂಗಳೂರಿನಿಂದ ಬಜಪೆಗೆ ಬಂದು, ತಮ್ಮ ಮತ್ತು ಶ್ರವಣ್ ಉಳಿದುಕೊಂಡಿದ್ದ ರೂಮಿಗೆ ಹೋದಾಗ, ಅಲ್ಲಿ ಬಿಹಾರದಿಂದ ಕೆಲಸಕ್ಕಾಗಿ ಬಂದಿದ್ದ ಹಿಟಾಚಿ ಆಪರೇಟರ್ ಬೈಜುಲಾಲ್ ಇದ್ದರು.
ಬೈಜುಲಾಲ್ ಹೇಳಿಕೆಯಂತೆ, ಅ.27 ರಂದು ತಾನು ಬಿಹಾರದಿಂದ ಕೆಲಸಕ್ಕಾಗಿ ಬಂದ ದಿನದ ಸಂಜೆ ಶ್ರವಣ್ “ಊಟಕ್ಕೆಂದು ಹೊರಗಡೆ ಹೋಗೋಣ” ಎಂದು ಹೇಳಿ ಮನೀಶ್ ಅವರನ್ನು ಪಲ್ಸರ್ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದರು. ಸುಮಾರು ರಾತ್ರಿ 8 ಗಂಟೆಯ ಸಮಯಕ್ಕೆ ಶ್ರವಣ್ ಒಬ್ಬನೇ ಬೈಕಿನಲ್ಲಿ ರೂಮಿಗೆ ಬಂದಿದ್ದರು. “ಮನೀಶ್ ಎಲ್ಲಿ” ಎಂದು ಕೇಳಿದಾಗ “ಮನೀಶ್ ಊರಿಗೆ ಹೋಗಿದ್ದಾನೆ, ಅದಕ್ಕೆ ನಾನೊಬ್ಬನೇ ವಾಪಾಸು ಬಂದಿದ್ದೇನೆ” ಎಂದಿದ್ದರು. “ನಾನು ಸಹ ಊರಿಗೆ ಹೋಗುತ್ತಿದ್ದೇನೆ, ನನಗೆ ಬೈಕಿನಲ್ಲಿ ಡ್ರಾಪ್ ಕೊಡು” ಎಂದು ಹೇಳಿದಾಗ ಬೈಜುಲಾಲ್ ಶ್ರವಣ್ಗೆ ಬೈಕಿನಲ್ಲಿ ಡ್ರಾಪ್ ಕೊಟ್ಟಿದ್ದರು.
ಮರುದಿನ ಸೋನು ಶರ್ಮಾ ಬಜಪೆ ಸುತ್ತಾಮುತ್ತ ತಮ್ಮನನ್ನು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ನಂತರ ನ.1 ರಂದು ಬಜಪೆ ಪೊಲೀಸ್ ಠಾಣೆಗೆ ಬಂದು ತಮ್ಮ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಬಜಪೆ ಪೊಲೀಸರು ಹಲವು ಕಡೆ ಹುಡುಕಾಡಿದರೂ ಉಪಯುಕ್ತ ಮಾಹಿತಿ ಲಭ್ಯವಾಗಿರಲಿಲ್ಲ.
ಹಣಕಾಸಿನ ವ್ಯವಹಾರದಲ್ಲಿ ತಮ್ಮ ಸಿಕ್ಕಿಹಾಕಿಕೊಂಡಿರಬಹುದೇ ಎಂಬ ಸಂದೇಹದಲ್ಲಿ ತಂದೆಯವರಿಗೆ ಕರೆ ಮಾಡಿ ಬ್ಯಾಂಕಿಗೆ ಹೋಗಿ ಮನೀಶ್ ಶರ್ಮಾ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ನೋಡಿದಾಗ, ತಮ್ಮನ ಖಾತೆಯಿಂದ ಅ.27 ರಂದು ರಾಜನ್ ಎಂಬವರಿಗೆ ಒಂದನೇ ಬಾರಿಗೆ 63,000 ರೂಪಾಯಿ ಮತ್ತು 2ನೇ ಬಾರಿಗೆ 720 ರೂಪಾಯಿ ಹಣ ವರ್ಗಾವಣೆಯಾಗಿದ್ದು, ಅ.28 ರಂದು ಅಷ್ಟೇ ಹಣ ರಾಜನ್ ಅವರ ಖಾತೆಯಿಂದ ಮನೀಶ್ ಶರ್ಮಾ ಅವರ ಸ್ನೇಹಿತನಾದ ಶ್ರವಣ್ ಅವರ ಖಾತೆಗೆ ವರ್ಗಾವಣೆಯಾಗಿತ್ತು.
ರಾಜನ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ, ಶ್ರವಣ್ ರಾಜನ್ ಅವರಿಗೆ “ಮನೀಶ್ ಶರ್ಮಾ ಎಂಬವನು ನಿಮಗೆ ಹಣ ಹಾಕುತ್ತಾನೆ, ಅಷ್ಟು ಹಣವನ್ನು ನನಗೆ ವಾಪಾಸು ಹಾಕು” ಎಂದು ಹೇಳಿದಂತೆ ತಾನು ಅ.28 ರಂದು ಬೆಳಿಗ್ಗೆ ಶ್ರವಣ್ ಖಾತೆಗೆ ಅಷ್ಟೂ ಹಣವನ್ನು ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದರು.
ನ.9 ರಂದು ಬಜಪೆ ಪೊಲೀಸರು ಬಜಪೆ ಚರ್ಚ್ ಜಂಕ್ಷನ್ ಸಿಸಿಟಿವಿ ಫೂಟೇಜ್ ತೋರಿಸಿದಾಗ, ಸಂಜೆ ಸುಮಾರು 6:41ಕ್ಕೆ ತಮ್ಮ ಮನೀಶ್ ಶರ್ಮಾ ಮತ್ತು ಶ್ರವಣ್ ಒಂದು ಬೈಕಿನಲ್ಲಿ ಹೋಗಿದ್ದು, ವಾಪಾಸು ಸಂಜೆ 7:52 ಗಂಟೆಗೆ ಶ್ರವಣ್ ಒಬ್ಬನೇ ಹೋಗುತ್ತಿರುವ ದೃಶ್ಯಾವಳಿ ಕಂಡುಬಂದಿತ್ತು.
ನ.13 ರಂದು ಬೆಳಗ್ಗೆ ಬಜಪೆ ಪೊಲೀಸ್ ಠಾಣೆಯ ಪೊಲೀಸರ ಜೊತೆಗೆ ತಮ್ಮ ಎಲ್ಲಾದರೂ ಇರಬಹುದೆಂದು ಹುಡುಕಾಡುತ್ತಿದ್ದಾಗ ಹಳೆ ಏರ್ಪೋರ್ಟ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹೋಗುತ್ತಿದ್ದಾಗ ಕೊಳೆತ ವಾಸನೆ ಬಂದಿದೆ. ಪಿರ್ಯಾದಿದಾರರು ಹಾಗೂ ಪೊಲೀಸರು ಕಚ್ಚಾ ರಸ್ತೆಯೊಂದರ ಬದಿಯಲ್ಲಿ ಸೂಕ್ಷ್ಮವಾಗಿ ಹುಡುಕಾಡಿದಾಗ ಕೂಡು ರಸ್ತೆಯ ಕಬ್ಬಿಣದ ಗೇಟ್ನ ಪಕ್ಕದ ಹೊಂಡದಲ್ಲಿ ಮೂಳೆಯ ತುಂಡುಗಳು, ತಲೆಬುರುಡೆಯ ಚೂರುಗಳು ಕಂಡು ಬಂದವು. ಅದೇ ಸ್ಥಳದಲ್ಲಿ ಪ್ಯಾಂಟ್ ಮತ್ತು ಶರ್ಟ್ ಇದ್ದವು. ಹತ್ತಿರದಿಂದ ಬಿದ್ದಿದ್ದ ಶರ್ಟ್ ನೋಡಿದಾಗ ಅದು ಮನೀಶ್ ಧರಿಸುತ್ತಿದ್ದ ಶರ್ಟ್ ಆಗಿತ್ತು.
ಈ ಎಲ್ಲಾ ವಿಚಾರಗಳಿಂದ ತಮ್ಮ ಮನೀಶ್ ಶರ್ಮಾ ಅವರನ್ನು ಸ್ನೇಹಿತ ಶ್ರವಣ್ ಅ.27 ರಿಂದ ನ.13 ರ ಮಧ್ಯದ ಅವಧಿಯಲ್ಲಿ ಯಾವುದೋ ದುರುದ್ದೇಶದಿಂದ ಯಾವುದೋ ಆಯುಧದಿಂದ ಹೊಡೆದು ಕೊಲೆ ಮಾಡಿ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಸೋನು ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



