Home Crime ಬಂಟ್ವಾಳ : ಕಟ್ಟಡದಿಂದ ಬಿದ್ದು ಕಟ್ಟಿಂಗ್ ಶಾಪ್ ಮಾಲಕ ಸಾವು…!!

ಬಂಟ್ವಾಳ : ಕಟ್ಟಡದಿಂದ ಬಿದ್ದು ಕಟ್ಟಿಂಗ್ ಶಾಪ್ ಮಾಲಕ ಸಾವು…!!

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಫರಂಗಿಪೇಟೆಯಲ್ಲಿ ಕಟ್ಟಡದ ಗೋಡೆಗೆ ಪೇಂಟ್ ಹೊಡೆಯುವ ವೇಳೆ ಆಯತಪ್ಪಿ ಬಿದ್ದು ಕಟ್ಟಿಂಗ್ ಶಾಪ್ ನಡೆಸುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.

ಮೃತನನ್ನು ಕೂಡ್ಲಪ್ಪ ಹಡಪದ (56) ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟ ಜಿಲ್ಲೆ ಇಳಕಲ್ ತಾಲೂಕು ಕಡಿವಾಳ ಗ್ರಾಮದವರಾಗಿದ್ದು, ಪ್ರಸ್ತುತ ಮಂಗಳೂರು ಪಡೀಲ್ ಮೇಘಾ ನಗರದಲ್ಲಿ ವಾಸವಾಗಿದ್ದರು. ಪತ್ನಿ ಜಯಶ್ರೀ ಹಡಪದ (43) ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ಕೂಡ್ಲಪ್ಪ ಅವರು ಬಂಟ್ವಾಳ ತಾಲೂಕು ಪುದು ಗ್ರಾಮದ ಫರಂಗಿಪೇಟೆಯ ನಾರ್ಬರ್ಟ್ ಲೋಬೊ ಅವರ ಎಫ್ ಎ ಕಟ್ಟಡದಲ್ಲಿ ಕಟ್ಟಿಂಗ್ ಶಾಪ್ ನಡೆಸಿಕೊಂಡಿದ್ದರು.

ನ.06 ರಂದು ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಸಂಜೆ 5 ಗಂಟೆ ಸುಮಾರಿಗೆ ಪತ್ನಿ ಜಯಶ್ರೀ ಅವರು ಗಂಡನ ಮೊಬೈಲ್‌ಗೆ ಕರೆ ಮಾಡಿದಾಗ ಯಾರೋ ಒಬ್ಬರು ಕರೆ ಸ್ವೀಕರಿಸಿ, ಸಂಜೆ 4 ಗಂಟೆ ಸುಮಾರಿಗೆ ಅಂಗಡಿಯ ಕಟ್ಟಡದ ಗೋಡೆಗೆ ಪೇಂಟ್ ಹೊಡೆಯುವ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ.

ಅದರಂತೆ ಪತ್ನಿ ಆಸ್ಪತ್ರೆಗೆ ಹೋದಾಗ ಕೂಡ್ಲಪ್ಪ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸಂಜೆ 7:13ಕ್ಕೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.