ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಸರಣಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪೈಕಿ, ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.
ನ್ಯಾಯಾಲಯಕ್ಕೆ ಹಾಜರಾದ ಆರೋಪಿ ಮಹಾರಾಷ್ಟ್ರ ಮೂಲದ ಆರೋಪಿ ವಿಶಾಲ್ ಪೊಂಕೆ (30) ಎಂದು ತಿಳಿಯಲಾಗಿದೆ.
ಕಡಬ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಈ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ದೊಡ್ಡಬಳ್ಳಾಪುರದ ನರಸಿಂಹ ಅಲಿಯಾಸ್ ರಾಜು, ಮಹಾರಾಷ್ಟ್ರದ ವಿಜಯ್ ಸುರೇಶ್ ಪೊಂಕೆ, ನವೀನ್ ಚಂದ್ರ ಸಿಂಗ್, ಉತ್ತರ ಕನ್ನಡದ ಚಂದ್ರಕಾಂತ್ ಪೂಜಾರಿ ಹಾಗೂ ಮಂಡ್ಯದ ಪ್ರಕಾಶ್ ಬಹದ್ದೂರ್ ಅವರಿಗೆ ಈಗಾಗಲೇ ಪುತ್ತೂರಿನ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು.
ಇದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರ ಮೂಲದ ವಿಶಾಲ್ ಪೊಂಕೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆತನ ಪತ್ತೆಗಾಗಿ ಪೊಲೀಸರು ಪ್ರಯತ್ನ ನಡೆಸಿದ್ದು, ಆರೋಪಿಯ ವಿರುದ್ಧ ನ್ಯಾಯಾಲಯದಿಂದ ಪ್ರೊಕ್ಲಮೇಶನ್ ಹೊರಡಿಸಲಾಗಿತ್ತು.
ಇದೀಗ 2026ರ ಅಕ್ಟೋಬರ್ 30ರಂದು ವಿಶಾಲ್ ಪೊಂಕೆ ಪುತ್ತೂರಿನ 2ನೇ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.



