Home Latest ಉಡುಪಿಯಲ್ಲಿ ಆಕಾಶವಾಣಿಯ ಎಫ್‌ಎಂ ಪ್ರಸಾರ ಕೇಂದ್ರ ಲೋಕಾರ್ಪಣೆ…!!

ಉಡುಪಿಯಲ್ಲಿ ಆಕಾಶವಾಣಿಯ ಎಫ್‌ಎಂ ಪ್ರಸಾರ ಕೇಂದ್ರ ಲೋಕಾರ್ಪಣೆ…!!

ಉಡುಪಿ: ಮಂಗಳೂರು ಆಕಾಶವಾಣಿಯ ಉಡುಪಿಯ ನೂತನ ಎಫ್‌ಎಂ ಟ್ರಾನ್ಸ್‌ಮಿಷನ್ ಕೇಂದ್ರವನ್ನು ಕೇಂದ್ರ ರೈಲ್ವೆ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.

ಈ ಮೂಲಕ ಉಡುಪಿ ಜಿಲ್ಲೆಯ ಆಕಾಶವಾಣಿ ಕೇಳುಗರ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ.
ಸುಮಾರು ₹2.85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕೇಂದ್ರವು 1 ಕಿಲೋವ್ಯಾಟ್ ಸಾಮರ್ಥ್ಯ ಹೊಂದಿದ್ದು, 101.9 ಮೆಗಾಹರ್ಟ್ಸ್ ತರಂಗಾಂತರದಲ್ಲಿ ಪ್ರಸಾರ ಸೇವೆ ಒದಗಿಸಲಿದೆ. ಸುಮಾರು 30 ಕಿ.ಮೀ. ವ್ಯಾಪ್ತಿಯಲ್ಲಿ ಎಫ್‌ಎಂ ಪ್ರಸಾರ ಲಭ್ಯವಾಗಲಿದ್ದು, ಉಡುಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಆಕಾಶವಾಣಿ ಶ್ರೋತೃಗಳಿಗೆ ಅನುಕೂಲವಾಗಲಿದೆ.

ಕೊಂಕಣ ರೈಲ್ವೆ ವಿಲೀನಕ್ಕೆ ರಾಜ್ಯಗಳ ಅನುಮತಿ ಅಗತ್ಯ

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಅನುಮತಿ ಅಗತ್ಯವಿದೆ ಎಂದು ತಿಳಿಸಿದರು.

ಕೊಂಕಣ ರೈಲ್ವೆ ಮಾರ್ಗದಲ್ಲಿ ಸುಮಾರು ಹತ್ತು ರೈಲು ನಿಲ್ದಾಣಗಳ ಜೋಡಿ ಹಳಿ ಕಾಮಗಾರಿ ಹಾಗೂ ಎರಡು ಸುರಂಗ ಮಾರ್ಗಗಳ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶವಿದೆ. ಬೈಂದೂರು ಮತ್ತು ಬಾರ್ಕೂರು ರೈಲು ನಿಲ್ದಾಣಗಳನ್ನು ಉನ್ನತೀಕರಿಸುವ ಕುರಿತು ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಂಗಳೂರಿನಿಂದ ರೈಲಿನ ಮೂಲಕ ಉಡುಪಿಗೆ ಆಗಮಿಸಿದ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಸದರು ಹಾಗೂ ಶಾಸಕರು ಸ್ವಾಗತಿಸಿದರು.
ಪ್ರವಾಸೋದ್ಯಮದ ದೃಷ್ಟಿಯಿಂದ ರಾಜ್ಯದಲ್ಲೇ ಪ್ರಮುಖ ಸ್ಥಾನ ಹೊಂದಿರುವ ಉಡುಪಿ ಜಿಲ್ಲೆಗೆ ರೈಲು ಸಂಪರ್ಕದ ಅಭಿವೃದ್ಧಿ ಅತ್ಯಗತ್ಯವಾಗಿದೆ. ನೂತನ ಎಫ್‌ಎಂ ಕೇಂದ್ರದ ಆರಂಭದೊಂದಿಗೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಒತ್ತು ದೊರೆತರೆ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಯಶ್ಪಾಲ್ ಸುವರ್ಣ, ಗುರುರಾಜ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.