Home Crime ಕೋಟ: ಬಿಲ್ಲಾಡಿಯಲ್ಲಿ ರಬ್ಬರ್ ಪ್ಲಾಂಟ್ ವ್ಯವಹಾರದ ವಿಚಾರದಲ್ಲಿ ಗಲಾಟೆ – ವ್ಯಕ್ತಿಗೆ ಏರ್‌ಗನ್‌ನಿಂದ ಗುಂಡೇಟು…!!

ಕೋಟ: ಬಿಲ್ಲಾಡಿಯಲ್ಲಿ ರಬ್ಬರ್ ಪ್ಲಾಂಟ್ ವ್ಯವಹಾರದ ವಿಚಾರದಲ್ಲಿ ಗಲಾಟೆ – ವ್ಯಕ್ತಿಗೆ ಏರ್‌ಗನ್‌ನಿಂದ ಗುಂಡೇಟು…!!

ಕೋಟ: ರಬ್ಬರ್ ಪ್ಲಾಂಟ್ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಉಂಟಾದ ವೈಮನಸ್ಸು ಹಿಂಸಾತ್ಮಕ ಘಟನೆಗೆ ತಿರುಗಿದ್ದು, ವ್ಯಕ್ತಿಯೊಬ್ಬರ ಮೇಲೆ ಏರ್‌ಗನ್‌ನಿಂದ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದ ಜಾನುವಾರುಕಟ್ಟೆ ಸಮೀಪ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಕೇರಳ ಮೂಲದ, ಬಿಲ್ಲಾಡಿ ಗ್ರಾಮದ ನಿವಾಸಿ ಬಿಬಿನ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಇವರು ಕಳೆದ ಸುಮಾರು 18 ವರ್ಷಗಳಿಂದ ಬಿಲ್ಲಾಡಿಯಲ್ಲಿ ವಾಸವಾಗಿದ್ದು, ರಬ್ಬರ್ ಪ್ಲಾಂಟ್ ವ್ಯವಹಾರ ನಡೆಸುತ್ತಿದ್ದಾರೆ.

ಪೊಲೀಸ್ ದೂರಿನ ಪ್ರಕಾರ, ಬಿಬಿನ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಜೋಸ್ ಮತ್ತು ಸುರೇಶ್ ಎಂಬವರು ಸರಿಯಾಗಿ ಕೆಲಸ ಮಾಡದೆ ಪದೇ ಪದೇ ಹಣ ಕೇಳುತ್ತಿದ್ದ ಕಾರಣ ಕೆಲಸ ಬಿಟ್ಟು, ಬಿಲ್ಲಾಡಿಯಲ್ಲಿ ರಬ್ಬರ್ ಪ್ಲಾಂಟ್ ಹೊಂದಿರುವ ಸಂತೋಷ್ ಎಂಬವರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೇ ವಿಚಾರದಲ್ಲಿ ಆರೋಪಿಗಳ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ನವೆಂಬರ್ 5ರಂದು ರಾತ್ರಿ ಸುಮಾರು 10.10ರ ವೇಳೆಗೆ ಬಿಬಿನ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಅಜಯ್ ಎಂಬಾತ ಕರೆ ಮಾಡಿ, ಜಾನುವಾರುಕಟ್ಟೆಯ ನಿಸರ್ಗ ಫಾರ್ಮ್ ಸಮೀಪ ಜೋಸ್ ಮತ್ತು ಸುರೇಶ್ ಸ್ಕೂಟಿಯಲ್ಲಿ ಬಂದು ಓಮ್ನಿ ವಾಹನಕ್ಕೆ ಅಡ್ಡಹಾಕಿ ಕತ್ತಿಯಿಂದ ಹಲ್ಲೆ ಮಾಡಲು ಬಂದಿರುವುದಾಗಿ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಬಿಬಿನ್ ಅವರನ್ನು ಕಂಡ ಸಂತೋಷ್, ನಿನ್ನನ್ನು ಈಗಲೇ ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಬಳಿಕ ಸಂತೋಷ್ ತನ್ನೊಂದಿಗಿದ್ದ ವ್ಯಕ್ತಿಗೆ ಏರ್‌ಗನ್‌ನಿಂದ ಗುಂಡು ಹಾರಿಸುವಂತೆ ಸೂಚಿಸಿದ್ದು, ಅದರಂತೆ ಆತ ಬಿಬಿನ್ ಅವರ ಬಲಕಾಲಿಗೆ ಗುಂಡು ಹಾರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಬಿಬಿನ್ ಅವರ ಬಲ ತೊಡೆ ಮತ್ತು ಬಲ ಸೊಂಟದ ಭಾಗಕ್ಕೆ ಪೆಲ್ಲೆಟ್ ತಾಗಿ ರಕ್ತಗಾಯವಾಗಿದೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.