Home Crime ಕೋಟ: ಚರ್ಚಿಗೆ ನಡೆದು ಹೋಗುತ್ತಿದ್ದ ವೃದ್ಧನಿಗೆ ಸ್ಕೂಟರ್ ಡಿಕ್ಕಿ – ಚಿಕಿತ್ಸೆ ಫಲಿಸದೆ ಸಾವು…!!

ಕೋಟ: ಚರ್ಚಿಗೆ ನಡೆದು ಹೋಗುತ್ತಿದ್ದ ವೃದ್ಧನಿಗೆ ಸ್ಕೂಟರ್ ಡಿಕ್ಕಿ – ಚಿಕಿತ್ಸೆ ಫಲಿಸದೆ ಸಾವು…!!

ಕೋಟ: ಚರ್ಚಿನಲ್ಲಿ ನಡೆಯುವ ಪೂಜೆಗೆ ನಡೆದುಕೊಂಡು ಹೋಗುತ್ತಿದ್ದ ವೃದ್ಧನಿಗೆ ಅತಿವೇಗದ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಮೃತಪಟ್ಟ ಘಟನೆ ಸಾಸ್ತಾನದಲ್ಲಿ ನಡೆದಿದೆ.

ಮೃತರು ಹೆನ್ರಿ ಫೆರ್ನಾಂಡಿಸ್ (75), ಟೆಲಿಫೋನ್ ಎಕ್ಸಚೇಂಜ್ ಬಿಲ್ಡಿಂಗ್, ಐರೋಡಿ ಗ್ರಾಮ, ಬ್ರಹ್ಮಾವರ ಎಂದು ತಿಳಿಯಲಾಗಿದೆ.

ಪತ್ನಿ ಆಲಿಸ್ ಫೆರ್ನಾಂಡಿಸ್ (73) ನೀಡಿದ ದೂರಿನಂತೆ, ಹೆನ್ರಿ ಫೆರ್ನಾಂಡಿಸ್ ಅವರು ಎಂದಿನಂತೆ ಬೆಳಿಗ್ಗೆ ಮನೆಯಿಂದ ಸಾಸ್ತಾನ ಸಂತ ಅಂತೋನಿ ಚರ್ಚಿನಲ್ಲಿ ನಡೆಯುವ ಪೂಜೆಗೆ ಹೊರಟಿದ್ದರು.

ಬೆಳಿಗ್ಗೆ 6:20ಕ್ಕೆ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಸರಕಾರಿ ಆಸ್ಪತ್ರೆ ಎದುರು ಬ್ರಹ್ಮಾವರ-ಕುಂದಾಪುರ ಎನ್.ಹೆಚ್ 66 ರಲ್ಲಿ KA-20-EH-9260 ನಂಬ್ರದ ಸ್ಕೂಟರ್ ಸವಾರ ವಿಷ್ಣು ಪ್ರಸಾದ್ ತನ್ನ ಸ್ಕೂಟರ್‌ನ್ನು ಬ್ರಹ್ಮಾವರದಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಎಡ ಬದಿಗೆ ಬಂದು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಹೆನ್ರಿ ಫೆರ್ನಾಂಡಿಸ್ ಅವರಿಗೆ ಡಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಹೆನ್ರಿ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆನ್ರಿ ಫೆರ್ನಾಂಡಿಸ್ ಅವರ ಮಧ್ಯಾಹ್ನ 2:03ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರಿಸಿದ್ದಾರೆ.