Home Crime ಶಾಸಕ ವೇದವ್ಯಾಸ್‌ ಕಾಮತ್‌ ಸಹಿತ ನಾಲ್ವರ ಮೇಲಿನ FIR ರದ್ದುಗೊಳಿಸಿದ ಹೈಕೋರ್ಟ್…!!

ಶಾಸಕ ವೇದವ್ಯಾಸ್‌ ಕಾಮತ್‌ ಸಹಿತ ನಾಲ್ವರ ಮೇಲಿನ FIR ರದ್ದುಗೊಳಿಸಿದ ಹೈಕೋರ್ಟ್…!!

​ಬೆಂಗಳೂರು: ರಾಜಕೀಯ ವೈಷಮ್ಯ ಹಾಗೂ ಪರಸ್ಪರ ವಾಗ್ವಾದದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಸಹಿತ ನಾಲ್ವರ ಮೇಲಿನ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಶಾಸಕ ಡಿ. ವೇದವ್ಯಾಸ್ ಕಾಮತ್, ಅಶ್ವಿತ್ ಕೊಟ್ಟಾರಿ, ಮಣಿ ಹಾಗೂ ಜಯಪ್ರಶಾಂತ್ ಆರ್. ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಈ ಆದೇಶ ನೀಡಿದೆ.

​2025 ರ ಮಾರ್ಚ್ 2 ರಂದು ಮಂಗಳೂರಿನ ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ವೇಳೆ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.
ವೇದವ್ಯಾಸ ಕಾಮತ್ ಕ್ಷೇತ್ರಕ್ಕೆ ಆಗಮಿಸಿದಾಗ, ಸ್ಥಳದಲ್ಲಿದ್ದ ಯಶವಂತ ಪ್ರಭು ಅವರನ್ನು ಉಲ್ಲೇಖಿಸಿ “ದೇವಾಲಯಗಳಿಗೆ ಕಲ್ಲು ಎಸೆದ ನಂತರ ನಿಮಗೆ ಇಲ್ಲಿ ಏನು ಕೆಲಸವಿದೆ?” ಪ್ರಶ್ನಿಸಿ, ಸಹಾಯಕರು ಹಲ್ಲೆ ನಡೆಸಿದ್ದಾರೆ ಎಂದು ಪ್ರಭು ಕೇಸು ದಾಖಲಿಸಿದ್ದರು.

ಇದೇ ಘಟನೆಗೆ ಸಂಬಂಧಿಸಿದಂತೆ ಪ್ರತಿ ದೂರು ಸಹ ದಾಖಲಾಗಿತ್ತು.
ವಾದ-ಪ್ರತಿವಾದ:
ಕೇಸು ರದ್ದು ಪಡಿಸುವಂತೆ ಕೋರಿದ ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿದರು. “ದೂರಿನಲ್ಲಿ ಉಲ್ಲೇಖಿಸಲಾಗಿರುವ ಆರೋಪಗಳು ಕೇವಲ ಘಟನೆಯನ್ನು ವೈಭವೀಕರಿಸುವ ಉದ್ದೇಶ ಹೊಂದಿವೆಯೇ ವಿನಃ, ಇದರಲ್ಲಿ ಯಾವುದೇ ಅಪರಾಧದ ನೈಜ ಅಂಶಗಳಿಲ್ಲ. ಇದು ದುರುದ್ದೇಶದಿಂದ ದಾಖಲಾದ ಪ್ರಕರಣವಾಗಿದೆ” ಎಂದು ಅವರು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕಿ ವಾಹೀದಾ ಎಂ. ಎಂ. ಅವರು ವಾದ ಮಂಡಿಸಿದರು.

ನ್ಯಾಯಾಲಯದ ತೀರ್ಪು:
ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠದ ಮಾನ್ಯ ನ್ಯಾಯಾಧೀಶರಾದ ಜಸ್ಟಿಸ್ ಎಂ. ನಾಗಪ್ರಸನ್ನ ಅವರು, ಸುಪ್ರೀಂ ಕೋರ್ಟ್‌ನ ಪ್ರಸಿದ್ಧ ‘ಭಜನ್ ಲಾಲ್’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದರು. ದೂರಿನಲ್ಲಿರುವ ಆರೋಪಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡರೂ ಸಹ, ಅವು ಮೇಲ್ನೋಟಕ್ಕೆ ಯಾವುದೇ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ. ಎದುರು ದೂರಿಗೆ ಈಗಾಗಲೇ ಪೊಲೀಸರು ‘ಬಿ’ ವರದಿ ಸಲ್ಲಿಸಿರುವುದರಿಂದ, ಈ ಪ್ರಕರಣದ ತನಿಖೆಯನ್ನು ಮುಂದುವರಿಸುವುದು ಕಾನೂನಿನ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು, ಬೆಂಗಳೂರಿನ ಹೆಚ್ಚುವರಿ ಸಿಜೆಎಂ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದ FIR ರದ್ದುಗೊಳಿಸಿ ಆದೇಶ ಹೊರಡಿಸಿದರು.