ಉಳ್ಳಾಲ: ಕಳೆದ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ಮಂಗಳವಾರ ರಾತ್ರಿಯಿಡೀ ಸುರಿದ ಮಳೆಗೆ ಎಸ್ಟೇಟ್ ಒಂದರ ಭಾರೀ ಎತ್ತರದ ಆವರಣ ಗೋಡೆ ಕುಸಿದು ಬಿದ್ದು, ಪಕ್ಕದ ಒಂಟಿ ಮನೆಯು ಸಂಪೂರ್ಣ ನೆಲಸಮಗೊಂಡ ಘಟನೆ ತೊಕ್ಕೊಟ್ಟು ಸಮೀಪದ ಕೆರೆಬೈಲ್‌ನಲ್ಲಿ ನಡೆದಿದೆ.
ಕೆರೆಬೈಲ್ ಗುಡ್ಡೆಯ ನಿವಾಸಿ ಕಿಶೋರ್ ಅವರ ಮನೆ ಸಂಪೂರ್ಣ ನೆಲಸಮಗೊಂಡಿದೆ. ಅಪಾಯವನ್ನು ನಿರೀಕ್ಷಿಸಿದ್ದ ಕುಟುಂಬದ ಐವರು ಸದಸ್ಯರು ಎರಡು ವಾರಗಳ ಹಿಂದಷ್ಟೇ ಮನೆಯಿಂದ ಸ್ಥಳಾಂತರಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಘೋರ ಅನಾಹುತವೊಂದು ತಪ್ಪಿದಂತಾಗಿದೆ ಎಂದು ತಿಳಿದು ಬಂದಿದೆ.
ಕೆರೆಬೈಲ್‌ನ ಗುಡ್ಡ ಪ್ರದೇಶದ ತುದಿಯಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಬೃಹತ್ ವಿಸ್ತೀರ್ಣವುಳ್ಳ ಐಷಾರಾಮಿ ಎಸ್ಟೇಟ್ ಸುತ್ತಲೂ ಎತ್ತರದ ಆವರಣ ಗೋಡೆಯನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷ ಸುರಿದ ಭಾರೀ ಮಳೆಗೆ ಎಸ್ಟೇಟ್‌ನ ಆವರಣ ಗೋಡೆ ಕುಸಿದು ನೆರೆಯ ಕಿಶೋರ್ ಅವರ ಮನೆಯ ಕಡೆಗೆ ವಾಲಿ ನಿಂತಿತ್ತು. ಈ ಬಗ್ಗೆ ಕಿಶೋರ್ ಅವರು ಸ್ಥಳೀಯ ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಮುಂಜಾಗೃತಾ ಕ್ರಮವಾಗಿ ನಗರಸಭೆ ಅಧಿಕಾರಿಗಳು ಕಿಶೋರ್ ಅವರ ಕುಟುಂಬ ಸೇರಿದಂತೆ ಎಸ್ಟೇಟ್ ಆವರಣ ಗೋಡೆ ಕುಸಿತದ ಭೀತಿಯಲ್ಲಿದ್ದ ನೆರೆಯ ಹತ್ತು ಮನೆಗಳ ಕುಟುಂಬಗಳನ್ನು ಬಾಡಿಗೆ ಮನೆಗಳಿಗೆ ಸ್ಥಳಾಂತರಿಸಿದ್ದರು.
ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಎಸ್ಟೇಟ್‌ನ ಆವರಣ ಗೋಡೆ ಕುಸಿದು ಕಿಶೋರ್ ಅವರ ಮನೆಯು ಸಂಪೂರ್ಣವಾಗಿ ನೆಲಸಮಗೊಂಡಿದ್ದು, ಘಟನೆಗೆ ಉಳ್ಳಾಲ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಶಾಂತ್, ನಗರಸಭೆ ಪೌರಾಯುಕ್ತ ಸಂತೋಷ್, ಕಂದಾಯ ನಿರೀಕ್ಷಕ ಪ್ರಮೋದ್ ಹಾಗೂ ಗ್ರಾಮ ಕರಣಿಕ ಅಮ್ಜದ್ ಖಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಲಿ ನಿಂತಿದ್ದ ಎಸ್ಟೇಟ್ ಆವರಣ ಗೋಡೆಯಿಂದ ಅಪಾಯ ಎದುರಾಗುವ ಸಾಧ್ಯತೆಯನ್ನು ನಿರೀಕ್ಷಿಸಿದ್ದ ಕಿಶೋರ್ ಅವರು ತಾಯಿ ಶಕುಂತಲಾ, ಪತ್ನಿ ಭಾರತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಎರಡು ವಾರಗಳ ಹಿಂದೆಯಷ್ಟೇ ಕಾವೂರಿನಲ್ಲಿರುವ ಪತ್ನಿಯ ಮನೆಗೆ ತೆರಳಿ ಅಲ್ಲೇ ನೆಲೆಸಿದ್ದರು ಎಂದು ತಿಳಿದು ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕಿಶೋರ್ ಅವರು ಮನೆಯನ್ನು ಕಳೆದುಕೊಂಡಿದ್ದು, ಅದೃಷ್ಟವಶಾತ್ ಅವರ ಕುಟುಂಬ ಬದುಕುಳಿದಿದೆ. ಎಸ್ಟೇಟ್‌ನ ಆವರಣ ಗೋಡೆ ಮತ್ತೆ ಕುಸಿಯುವ ಸ್ಥಿತಿಯಲ್ಲಿದ್ದು, ನೆರೆಯ ಕಾಶಿನಾಥ್, ಮಣಿ, ರಝಾಕ್, ನಝೀರ್, ಅಣ್ಣು, ರಾಜ ಕೊಟ್ಟಾರಿ ಹಾಗೂ ಸತ್ಯ ಅವರ ಮನೆಗಳೂ ಅಪಾಯದಲ್ಲಿವೆ. ನಗರಸಭೆ ಅಧಿಕಾರಿಗಳು ತಕ್ಷಣವೇ ಮನೆಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.
“ವಿಪರೀತ ಮಳೆಯಿಂದ ಕೆರೆಬೈಲ್‌ನಲ್ಲಿ ಕಾಂಪೌಂಡ್ ಕುಸಿದು ಬಿದ್ದು ಮನೆಗೆ ಹಾನಿಗೀಡಾಗಿದೆ. ಈ ಕುಟುಂಬಕ್ಕೆ ಪರಿಹಾರದ ವ್ಯವಸ್ಥೆ ಮಾಡಲಾಗುವುದು. ಈ ಮನೆಯವರು ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಘಟನೆ ನಡೆದ ಸ್ಥಳದಲ್ಲಿ ಅಪಾಯದಂಚಿನಲ್ಲಿರುವ ನಾಲ್ಕು ಕುಟುಂಬಗಳನ್ನು ಸ್ಥಳಾಂತರಿಸಲು ನಗರಸಭೆಗೆ ಸೂಚನೆ ನೀಡಿದ್ದೇನೆ ಎಂದು . ಪ್ರಶಾಂತ, ತಹಶೀಲ್ದಾರ್ ಪ್ರಶಾಂತ್
ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತ ಸಂತೋಷ್ ಹಾಗೂ ತಹಶೀಲ್ದಾರ್ ಪ್ರಶಾಂತ್ ಅವರಿಗೆ ಸೂಚನೆ ನೀಡಿದ್ದೇನೆ. ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಉದ್ಯಮಿಗಳು ಹಾಗೂ ಶ್ರೀಮಂತರು ಕಟ್ಟಡ ನಿರ್ಮಾಣ ಮಾಡಬೇಕು. ಈ ಘಟನೆಯಿಂದ ತೊಂದರೆಗೊಳಗಾದವರಿಗೆ ಮನೆ ಮಾಲೀಕರು ಕೂಡ ಪರಿಹಾರ ನೀಡಬೇಕು ಎಂದು ತಿಳಿಸಿದ್ದಾರೆ.
ಈ ಕುರಿತು ಅಧಿಕಾರಿಗಳು, ಮನೆ ಮಾಲೀಕರು ಹಾಗೂ ಊರವರು ಇಂದು ಸಂಜೆ ಸಭೆ ನಡೆಸಿ ಚರ್ಚೆ ನಡೆಸಲಿದ್ದಾರೆ. ಪ್ರತಿಯೊಂದಕ್ಕೂ ಸರ್ಕಾರ ಅಥವಾ ಅಧಿಕಾರಿಗಳೇ ಹೇಳಬೇಕು ಎಂಬ ಮನೋಭಾವನೆ ಜನರಲ್ಲಿ ಇರಬಾರದು. ದೊಡ್ಡ ಮನೆ ಕಟ್ಟುವವರಲ್ಲಿ ಜನಪರ ಕಾಳಜಿ ಇರಬೇಕು. ಹಾನಿಗೊಳಗಾದ ಮನೆಗೆ ಸರ್ಕಾರ ಪರಿಹಾರ ನೀಡಲಿದೆ. ಇದಕ್ಕೆ ಅಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಲಿದ್ದಾರೆ. ಆದರೆ ಹೆಚ್ಚುವರಿ ಪರಿಹಾರವನ್ನು ಘಟನೆಗೆ ಕಾರಣವಾದ ಮನೆ ಮಾಲೀಕರು ನೀಡಬೇಕು. ಯಾವುದೇ ಮನೆಗೆ ಹಾನಿಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ.ಎಂದು ಆರೋಗ್ಯ ಸಚಿವ ಯು.ಟಿ. ಖಾದರ್, ತಿಳಿಸಿದ್ದಾರೆ.




