ಮಂಗಳೂರು: ನಗರದ ಅತ್ತಾವರ ಕಟ್ಟೆ ಬಳಿ ಇರುವ ವಾಣಿಜ್ಯ ಸಮುಚ್ಚಯವೊಂದರಲ್ಲಿರುವ ಲಾಡ್ಜ್ನ ಕೊಠಡಿಯಲ್ಲಿ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.
ಅದೃಷ್ಟವಶಾತ್ ಕೊಠಡಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಾಂಡೇಶ್ವರ ಅಗ್ನಿಶಾಮಕ ಠಾಣಾ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದೆ.
ನಾಲ್ಕನೇ ಮಹಡಿಯ ಲಾಡ್ಜ್ ರೂಂನಲ್ಲಿ ಬೆಂಕಿ: ನೆಲಮಹಡಿ ಸೇರಿದಂತೆ ಒಟ್ಟು ನಾಲ್ಕು ಮಹಡಿಗಳಿರುವ (Ground+4) ಈ ಕಮರ್ಷಿಯಲ್ ಕಟ್ಟಡದ ಮೊದಲ ಮಹಡಿಯಿಂದ ಮೇಲ್ಭಾಗದಲ್ಲಿ ಲಾಡ್ಜ್ ಕಾರ್ಯಾಚರಿಸುತ್ತಿದೆ. ನಾಲ್ಕನೇ ಮಹಡಿಯಲ್ಲಿದ್ದ ಕೊಠಡಿಯೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಕಿಟಕಿಯ ಮೂಲಕ ಬೆಂಕಿಯ ಜ್ವಾಲೆ ಹಾಗೂ ಹೊಗೆ ಹೊರಬರುತ್ತಿರುವುದನ್ನು ಕಂಡು ಸ್ಥಳೀಯರು ಮತ್ತು ಪಕ್ಕದ ಕೊಠಡಿಗಳಲ್ಲಿದ್ದವರು ಗಾಬರಿಗೊಂಡರು. ತಕ್ಷಣವೇ ಕಟ್ಟಡದಲ್ಲಿದ್ದ ಇತರರು ಕೆಳಗೆ ಧಾವಿಸಿ ಹೊರಬಂದಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದ ನಿರ್ದಿಷ್ಟ ಕೊಠಡಿಯು ಆ ಸಮಯದಲ್ಲಿ ಖಾಲಿಯಾಗಿದ್ದು, ಯಾರೂ ವಾಸವಿರಲಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಠಡಿಯಲ್ಲಿದ್ದ ಎಸಿಯಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಈ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ, ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ವಾಹನ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನವಾಜ್ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿ ಪಕ್ಕದ ಕೊಠಡಿಗಳಿಗೆ ವ್ಯಾಪಿಸದಂತೆ ಕೆಲವೇ ಕ್ಷಣಗಳಲ್ಲಿ ಸಂಪೂರ್ಣವಾಗಿ ನಂದಿಸಿದರು.
ಅವಘಡದ ಪರಿಣಾಮವಾಗಿ ಕೊಠಡಿಯಲ್ಲಿದ್ದ ಎಸಿ, ಮಂಚ, ಹಾಸಿಗೆ, ಫ್ಯಾನ್ ಸೇರಿದಂತೆ ಒಳಗಿದ್ದ ಸಾಮಗ್ರಿಗಳು ಬೆಂಕಿಗೆ ಸುಟ್ಟು ಹಾನಿಗೊಂಡಿವೆ. ಸಮಯಪ್ರಜ್ಞೆಯಿಂದ ಬೆಂಕಿಯನ್ನು ಶೀಘ್ರ ನಿಯಂತ್ರಿಸಿದ್ದರಿಂದ ದೊಡ್ಡ ಪ್ರಮಾಣದ ನಷ್ಟ ಹಾಗೂ ಅನಾಹುತ ತಪ್ಪಿದಂತಾಗಿದೆ.



