ಮಣಿಪಾಲ: ಸಾರ್ವಜನಿಕ ರಸ್ತೆಯಲ್ಲಿ ಗುಂಪು ಸೇರಿಕೊಂಡು ಅಪಾಯಕಾರಿ ರೀತಿಯಲ್ಲಿ ಪಟಾಕಿ ಸಿಡಿಸಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರ ಮೇಲೆ ಪಟಾಕಿಗಳನ್ನು ಎಸೆದು ಉಪದ್ರವ ಮಾಡುತ್ತಿದ್ದ ಆರೋಪದ ಮೇಲೆ 15ರಿಂದ 20 ಮಂದಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ ಸುಮಾರು 11 ಗಂಟೆಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಎಂ. ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್ ಅಪಾರ್ಟ್ಮೆಂಟ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಕೆಲವರು ಅಪಾಯಕಾರಿ ರೀತಿಯಲ್ಲಿ ಪಟಾಕಿ ಸಿಡಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.
ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ಸುಮಾರು 15ರಿಂದ 20 ಮಂದಿ ಗುಂಪಾಗಿ ಸೇರಿಕೊಂಡು ಪಟಾಕಿಗಳನ್ನು ಕೈಯಲ್ಲಿ ಹಿಡಿದು ಸಿಡಿಸುತ್ತಾ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನಗಳ ಮೇಲೆ ಎಸೆಯುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಸ್ಥಳೀಯರಾದ ಅನಿಲ್, ಕೀರ್ತಿ, ಡೆನಿಸ್, ರವಿಶೆಟ್ಟಿ ಹಾಗೂ ಜ್ಞಾನೇಶ್ವರ್ ಅವರು ಮಾಹಿತಿ ನೀಡಿದ್ದು, ಪೊಲೀಸರನ್ನು ಕಂಡ ಕೂಡಲೇ ಗುಂಪಿನಲ್ಲಿದ್ದವರು ಸ್ಥಳದಿಂದ ಓಡಿಹೋಗಿದ್ದಾರೆ ಎನ್ನಲಾಗಿದೆ.
ಪೊಲೀಸರು ವಿಚಾರಣೆ ನಡೆಸಿದಾಗ ಆರ್ಯನ್ ಕುಮಾರ್, ಆದಿತ್ಯ, ಪ್ರಿಯಾಂಶ್, ಸಿದ್ದಾಂತ್ ಸಿಂಗ್, ಪ್ರಿಯಜಿತ್ ಸಿಂಗ್ ಸೇರಿದಂತೆ ಇತರರ ಹೆಸರುಗಳು ತಿಳಿದುಬಂದಿವೆ.
ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದರ ಜೊತೆಗೆ ಕರ್ತವ್ಯದಲ್ಲಿದ್ದ ಸಮವಸ್ತ್ರಧಾರಿ ಪೊಲೀಸರ ಸೂಚನೆಗಳನ್ನು ಪಾಲಿಸದೆ, ಪೊಲೀಸರ ಮೇಲೆಯೇ ಪಟಾಕಿ ಎಸೆದು ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ., ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



