ಉಡುಪಿ : ಪವರ್ ಫ್ರೆಂಡ್ಸ್, ಪೆರಂಪಳ್ಳಿ ಇವರ ನೇತೃತ್ವದಲ್ಲಿ ನೇತ್ರತ್ವದಲ್ಲಿ ಪೆರಂಪಳ್ಳಿ ಚರ್ಚ್ ವೃತ್ತದ ಬಳಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ದಾನಿಗಳಾದ ಅನಿಶ್ ಜನರಲ್ ಸ್ಟೋರ್ಸ್, ಪೆರಂಪಳ್ಳಿ, ಯೂನಿಯನ್ ಬ್ಯಾಂಕ್, ಪೆರಂಪಳ್ಳಿ ಹಾಗೂ ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ ಇವರ ಸಹಕಾರದಿಂದ ಒಟ್ಟು 6 ಬ್ಯಾರಿಕೇಡ್ಗಳ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.
ಈ ಕಾರ್ಯಕ್ರಮವು ಪವರ್ ಫ್ರೆಂಡ್ಸ್, ಪೆರಂಪಳ್ಳಿ ಇದರ ಅಧ್ಯಕ್ಷರಾದ ಅನಿಲ್ ಗೊನ್ಸಲ್ವಿಸ್ ಅವರ ನೇತ್ರತ್ವದಲ್ಲಿ ನಡೆಯಿತು . ಫಾತಿಮಾ ಮಾತೆ ಚರ್ಚ್ನ ಧರ್ಮ ಗುರುಗಳಾದ ರೆಜಿನೋಲ್ಡ್ ಪಿಂಟೋ, ಮಣಿಪಾಲ ಠಾಣೆಯ ಮುಖ್ಯ ಪೊಲೀಸ್ ಅಧಿಕಾರಿಯಾದ ಮಹೇಶ್ ಪ್ರಸಾದ್ ಹಾಗೂ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಫಾತಿಮಾ ಮಾತೆ ಚರ್ಚ್ನ ಧರ್ಮ ಗುರುಗಳಾದ ರೆಜಿನೋಲ್ಡ್ ಪಿಂಟೋ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಆಶೀರ್ವಚನ ನೀಡಿ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪವರ್ ಫ್ರೆಂಡ್ಸ್, ಪೆರಂಪಳ್ಳಿ ಸಂಘಟನೆಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ದೇವರ ಕೃಪೆ ಎಲ್ಲರ ಮೇಲಿರಲಿ ಎಂದು ಆಶೀರ್ವಚನ ನೀಡಿದರು. ಮಣಿಪಾಲ ಠಾಣೆಯ ಮುಖ್ಯ ಪೊಲೀಸ್ ಅಧಿಕಾರಿಯಾದ ಮಹೇಶ್ ಪ್ರಸಾದ್ ಅವರು ಪವರ್ ಫ್ರೆಂಡ್ಸ್, ಪೆರಂಪಳ್ಳಿ ಸಂಘಟನೆಗೆ ಧನ್ಯವಾದ ತಿಳಿಸಿ ಊರಿನ ಒಳಿತಿಗಾಗಿ ದಾನಿಗಳ ನೆರವಿನಿಂದ ಅಪಘಾತ ನಿಯಂತ್ರಿಸಲು ಬ್ಯಾರಿಕೇಡ್ಗಳ ಅಳವಡಿಸುವುದರ ಮೂಲಕ ವಾಹನ ಸವಾರರಿಗೆ ಹಾಗೂ ನಾಗರಿಕರಿಗೆ ಎಚ್ಚರ ವಹಿಸಲು ಇದೊಂದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.
ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಮೊದಲಿಗೆ ಪವರ್ ಫ್ರೆಂಡ್ಸ್, ಪೆರಂಪಳ್ಳಿ ತಂಡದ ಎಲ್ಲರಿಗೂ ಹಾಗೂ ದಾನಿಗಳಿಗೂ ಅಭಿನಂದನೆ ಸಲ್ಲಿಸಿ ಊರಿನಲ್ಲಿ ಅಪಘಾತ ತಡೆಗಟ್ಟಲು ಯುವಕರು ಒಂದಾದರೆ ಅದು ಬೇರೆ ಊರಿಗೂ ಮಾದರಿಯಾಗುತ್ತದೆ. ಬ್ಯಾರಿಕೇಡ್ ಅಳವಡಿಕೆಯಿಂದ ವಾಹನ ವೇಗವನ್ನು ನಿಯಂತ್ರಿಸಲು ಸಾಧ್ಯ. ವೃತ್ತವಿರುವ ಸ್ಥಳದಲ್ಲಿ ರಸ್ತೆ ದಾಟಲು ಬ್ಯಾರಿಕೇಡ್ ಇರುವುದರಿಂದ ಸಾರ್ವಜನಿಕರಿಗೆ ಸಹಕಾರಿಯಾಗುತ್ತದೆ. ಇಂತಹ ಸಮಾಜಮುಖಿ ಚಟುವಟಿಕೆಗಳಿಗೆ ನಮ್ಮೆಲ್ಲರ ಬೆಂಬಲವಿದೆ ಎಂದು ತಿಳಿಸಿ ಸೇರಿದ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪೆರಂಪಳ್ಳಿ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದ್ಯಸರು, ಊರಿನ ನಾಗರೀಕರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಕೃಷಿಕ ಸಂಘದ ಮಾಜಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಶ್ರೀಯಾನ್ ಅವರು ನಿರೂಪಿಸಿ, ಸ್ವಾಗತಿಸಿ ಹಾಗೂ ವಂದಿಸಿದರು.






