ಕಿನ್ನಿಗೋಳಿ: ಹಲಸಿನಕಾಯಿ ಕೀಳಲು ಹೋಗಿ ಮರದಿಂದ ಕಾಂಕ್ರೀಟ್ ರಸ್ತೆಗೆ ಬಿದ್ದು ವ್ಯಕ್ತಿಯೊಬ್ಬ ಸಾವನಪ್ಪಿದ ಘಟನೆ ಕಿನ್ನಿಗೋಳಿ ಸಮೀಪದ ಬಾಬಕೋಡಿಯಲ್ಲಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ಕೆಮ್ಮಡೆಯ ಮೂಲದ ಪ್ರಸ್ತುತ ಕರ್ನಿರೆ ನಿವಾಸಿ, ಹರೀಶ್ (40) ಎಂದು ತಿಳಿದು ಬಂದಿದೆ.
ಹರೀಶ್ ಶುಕ್ರವಾರ ಮಧ್ಯಾಹ್ನ ಬಾಬಕೋಡಿಯ ಪಿಲಿಕ್ಸ್ ಡಿಸೋಜ ಎಂಬವರ ಮನೆಗೆ ಹಲಸಿನ ಕಾಯಿ ಕೀಳಲು ತೆರಳಿದ್ದು ಮೊದಲಿಗೆ ತೆಂಗಿನ ಮರ ಹತ್ತಿ ತೆಂಗಿನ ಕಾಯಿ ಕಿತ್ತು ಬಳಿಕ ಹಲಸಿನ ಮರ ಹತ್ತಿದ್ದರು. ಈ ವೇಳೆ ಮರದಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ.
ಹರೀಶ್ ಮರಕಡಿಯುವ ಕೆಲಸ ನಿರ್ವಹಿಸುತ್ತಿದ್ದು, ಒಂದು ವರ್ಷದ ಹಿಂದೆ ಕಿನ್ನಿಗೋಳಿಯ ಮುಖ್ಯ ರಸ್ತೆ ಬದಿಯಲ್ಲಿ ಮರದ ರೆಂಬೆ ಕಡಿಯಲು ಮರ ಹತ್ತಿದ್ದ ವೇಳೆ ಮರದಲ್ಲಿಯೇ ತಲೆ ಸುತ್ತು ಬಂದು ಸಿಲುಕಿದ್ದರು. ಆ ಸಂದರ್ಭ ಅದೇ ದಾರಿಯಲ್ಲಿ ಹೋಗುತ್ತಿದ್ದ ಪಟ್ಟೆ ನಿವಾಸಿ ವಿಜಯ್ ಅಮೀನ್ ಮರ ಹತ್ತಿ ಹಗ್ಗ ಬಳಸಿ ಹರೀಶ್ ರನ್ನು ಮರದ ರೆಂಬೆಗೆ ಕಟ್ಟಿ, ಬಳಿಕ ಯಂತ್ರದ ಮೂಲಕ ಕೆಳಗಿಳಿಸಲಾಗಿತ್ತು. ಮೃತ ಹರೀಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.