ಉಡುಪಿ: ಶಿರ್ವದ ಡೇವಿಡ್ ಡಿಸೋಜಾ ಕೊಲೆಯ ಬಳಿಕ ಉಡುಪಿ ಜಿಲ್ಲೆಯಲ್ಲಿ ಉದ್ಯಮಿಗಳಿಗೆ ಕೋಟ್ಯಂತರ ರೂ. ಸುಲಿಗೆ ಬೇಡಿಕೆ ಇಟ್ಟು ಜೀವ ಬೆದರಿಕೆ ಒಡ್ಡುತ್ತಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಪ್ರಕರಣದಲ್ಲಿ ಶಿರ್ವ ಪೊಲೀಸರು ಮಹತ್ವದ ಬಂಧನ ಮಾಡಿದ್ದಾರೆ.
ಉದ್ಯಮಿಗಳ ಮೊಬೈಲ್ ನಂಬರ್‌ಗಳನ್ನು ಹೇಮಂತ್ ಪೂಜಾರಿಗೆ ನೀಡಿ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ಸಾಂತೂರು ಗ್ರಾಮದ ಹರೀಶ್ ಪೂಜಾರಿ (45) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?:
ಡೇವಿಡ್ ಡಿಸೋಜಾ ಕೊಲೆಯ ಬಳಿಕ ಹೇಮಂತ್ ಪೂಜಾರಿ, ಪಡುಬಿದ್ರಿ, ಮಣಿಪಾಲ, ಕಾಪು ಮತ್ತು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯವಹಾರ ಮಾಡುತ್ತಿದ್ದ ಉದ್ಯಮಿಗಳನ್ನು ಗುರಿಯಾಗಿಸಿಕೊಂಡಿದ್ದ. ಇಂಟರ್‌ನ್ಯಾಷನಲ್ ನಂಬರ್‌ಗಳಿಂದ ಕರೆ ಮಾಡಿ ಕೋಟ್ಯಂತರ ರೂ. ಬೇಡಿಕೆ ಇಟ್ಟು, ಕೊಡದಿದ್ದರೆ ಡೇವಿಡ್ ಡಿಸೋಜಾ ರೀತಿಯಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದ. ಈ ಸಂಬಂಧ ಮೇಲಿನ ಎಲ್ಲ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ.
ಶಿರ್ವ ಪೊಲೀಸ್ ಠಾಣೆ ಪ್ರಕರಣದ ತನಿಖೆ ವೇಳೆ ಹರೀಶ್ ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಾನು ಹೇಮಂತ್ ಪೂಜಾರಿಗೆ ಶಿರ್ವ ಪ್ರಕರಣದ ದೂರುದಾರರ ಮೊಬೈಲ್ ನಂಬರ್ ನೀಡಿ ಕೃತ್ಯಕ್ಕೆ ಸಹಕರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಈ ಹಿನ್ನೆಲೆಯಲ್ಲಿ ನ.02 ರಂದು ಹರೀಶ್ ಪೂಜಾರಿಯನ್ನು ದಸ್ತಗಿರಿ ಮಾಡಿ, ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಕೋಕಾ ಕಾಯ್ದೆ ಅಳವಡಿಕೆ – 10 ಆರೋಪಿಗಳ ಬಂಧನ, ಭೂಗತ ಪಾತಕಿ ಹೇಮಂತ್ ಪೂಜಾರಿ ತಲೆಮರೆಸಿಕೊಂಡಿದ್ದಾನೆ.
ಕಾಪು ತಾಲೂಕು ಮುದರಂಗಡಿಯ ಸೈಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಅಳವಡಿಸಲಾಗಿದ್ದು, ಒಟ್ಟು 10 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಭೂಗತ ಪಾತಕಿ ಹೇಮಂತ್ ಪೂಜಾರಿ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಏನಾಗಿತ್ತು?
2026ರ ಆಗಸ್ಟ್ 7 ರಂದು ಮಧ್ಯಾಹ್ನ 3:45ಕ್ಕೆ ಮೋಟಾರ್ ಸೈಕಲ್‌ನಲ್ಲಿ ಬಂದ ಆರೋಪಿಗಳ ಪೈಕಿ ಸಹಸವಾರನು ಪಿಸ್ತೂಲ್‌ನಿಂದ ಡೇವಿಡ್ ಡಿಸೋಜಾ ಅವರ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ವೇಳೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ 3 ಆರೋಪಿಗಳು ಬಸ್ಸಿನಲ್ಲಿ ಭಟ್ಕಳ ಕಡೆಗೆ ಹೋಗುತ್ತಿರುವ ಖಚಿತ ಮಾಹಿತಿ ಮೇರೆಗೆ ಬೈಂದೂರಿನ ಒತ್ತಿನಾಣೆಯಲ್ಲಿ ಬಸ್ ತಡೆದು ಪರಿಶೀಲಿಸಿದಾಗ, ಮೂವರು ಬಸ್ಸಿನಿಂದ ಇಳಿದು ಓಡಿದ್ದರು.
ಬೆನ್ನಟ್ಟಿ ಹಿಡಿಯುವ ವೇಳೆ ಓರ್ವ ಆರೋಪಿ ಕಾಪು ಠಾಣಾ ಪಿಎಸ್‌ಐ ಅವರನ್ನು ದೂಡಿ ಹಾಕಿ, ಆತನ ಕೈಯಲ್ಲಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದರು. ಈತನೇ ಡೇವಿಡ್‌ಗೆ ಗುಂಡು ಹಾರಿಸಿದ ಪ್ರಮುಖ ಶೂಟರ್ ರಾಜು ಎಂದು ತಿಳಿದುಬಂದಿದೆ. ಪೊಲೀಸರ ಮೇಲೆ ಗುಂಡು ಹಾರಿಸಿದ ಬಗ್ಗೆ ಬೈಂದೂರು ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳು:
- ರಾಜು @ ಫಾಜಿ @ ಸುಭೋದ್ @ ರಾಜು ಹೇತ್ರಾಮ್ ಜಾಟವ್ (42), ಉತ್ತರ ಪ್ರದೇಶ
- ಅನ್ಮೋಲ್ ರಸ್ತೋಗಿ (23), ಉತ್ತರಾಖಂಡ
- ಜಿಯಾಹುಲ್ ವಜೂಲ್ ಶೇಖ್ @ ದೀಪಕ್ (38), ಬಿಹಾರ
- ಚಿರಾಗ್ ಪೂಜಾರಿ (24), ಎರ್ಮಾಳು
- ಮಹಮ್ಮದ್ ಇರ್ಷಾದ್ (46), ಎರ್ಮಾಳು
- ಸದಾನಂದ ದೇವಾಡಿಗ (41), ಎರ್ಮಾಳು
- ಕಿಶೋರ್ ರಾಮ ಪೂಜಾರಿ (47), ಅದಮಾರು
- ಸೂರಜ್ ಕುಮಾರ್ (31), ಬಿಹಾರ
- ಲೋಕೇಶ್ ತೇಜ ಕೊಠಾರಿ (42), ಯಡ್ತರೆ, ಬೈಂದೂರು
- ಅನೂಜ್ ಕುಮಾರ್ ಕಮಲೇಶ್ವರ ಪ್ರಸಾದ್ ಪಟೇಲ್ (36), ಬಿಹಾರ
11ನೇ ಆರೋಪಿ ಹೆಚ್.ಪಿ @ ಹೇಮಂತ್ ಪೂಜಾರಿ ತಲೆಮರೆಸಿಕೊಂಡಿದ್ದಾನೆ.
KCOCA ಅಳವಡಿಕೆ:
ಎಲ್ಲ ಆರೋಪಿಗಳು ಹೇಮಂತ್ ಪೂಜಾರಿ, ಅನೂಜ್ ಕುಮಾರ್ ಹಾಗೂ ಕಿಶೋರ್ ಪೂಜಾರಿ ಜೊತೆ ಸೇರಿಕೊಂಡು ಸಂಘಟಿತ ಅಪರಾಧ ಮಾಡಿರುವುದು ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ, ಎಸ್‌ಪಿ ಮೂಲಕ ಕೋರಿಕೆ ಸಲ್ಲಿಸಲಾಗಿತ್ತು. ಅದರಂತೆ ಪಶ್ಚಿಮ ವಲಯದ ಡಿಐಜಿ ಅವರು KCOCA ಅಡಿ ತನಿಖೆಗೆ ಅನುಮತಿ ನೀಡಿದ್ದಾರೆ.
ಇದೀಗ ಪ್ರಕರಣದ ಆರೋಪಿಗಳು ಹಾಗೂ ಸಂಪೂರ್ಣ ಕಡತವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಕೋಕಾ ನ್ಯಾಯಾಲಯ ಮೈಸೂರಿಗೆ ಹಸ್ತಾಂತರಿಸಲಾಗಿದೆ. ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಮುಂದಿನ ತನಿಖೆಯನ್ನು ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರು ನಡೆಸಲಿದ್ದಾರೆ.



