ಪಡುಬಿದ್ರಿ: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಬೆಳಗ್ಗೆ ಪಡುಬಿದ್ರೆ ಜಂಕ್ಷನ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು 45 ವರ್ಷದ ನಿರಂಜನ ಹೊಳ್ಳ ಎಂದು ಗುರುತಿಸಲಾಗಿದೆ. ಬೆಳಗ್ಗೆ ಸುಮಾರು 11.30ರ ವೇಳೆಗೆ ಕಾಪು ತಾಲೂಕು ನಾಲು ಗ್ರಾಮದ ಪಡುಬಿದ್ರೆ ಜಂಕ್ಷನ್ ಬಳಿ ಕಿರಣ್ ಕುಮಾರ್ ಎಂಬಾತ ಚಲಾಯಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದ ನಿರಂಜನ ಹೊಳ್ಳ ಅವರಿಗೆ ಗಂಭೀರ ಗಾಯಗಳಾಗಿತ್ತು.
ತಕ್ಷಣ ಅವರನ್ನು ಪಡುಬಿದ್ರೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ಕುರಿತು ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.




