Home Crime ಉಡುಪಿ: ಲಂಡನ್‌ನಲ್ಲಿ ಉದ್ಯೋಗದ ಆಮಿಷವೊಡ್ಡಿ 16.16 ಲಕ್ಷ ರೂ. ವಂಚನೆ…!!

ಉಡುಪಿ: ಲಂಡನ್‌ನಲ್ಲಿ ಉದ್ಯೋಗದ ಆಮಿಷವೊಡ್ಡಿ 16.16 ಲಕ್ಷ ರೂ. ವಂಚನೆ…!!

ಉಡುಪಿ: ಯು.ಕೆ. (ಲಂಡನ್)ನಲ್ಲಿ ಪತಿ-ಪತ್ನಿಗೆ ಉದ್ಯೋಗ ಕೊಡಿಸುವುದಾಗಿ ಸುಳ್ಳು ಭರವಸೆ ನೀಡಿ 16.16 ಲಕ್ಷ ರೂಪಾಯಿ ವಂಚಿಸಿರುವ ಆರೋಪದ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊನ್ನಾವರ ತಾಲೂಕಿನ ಕೋಡಾಣಿ ನಿವಾಸಿ ಸುನೀಲ್ (46) ಎಂಬವರು ನೀಡಿದ ದೂರಿನ ಪ್ರಕಾರ, ಉಡುಪಿಯ ಕೆಳಾರ್ಕಳಬೆಟ್ಟು ನಿವಾಸಿ ಸವಿತಾ ರೋಡ್ರಿಗಸ್ (41), ಬೆಂಗಳೂರಿನ ಅನೇಕಲ್ ನಿವಾಸಿಗಳಾದ ಪ್ರಕೃತಿ (34) ಹಾಗೂ ಸುನಿತಾ ಎಂಬವರು ದೂರುದಾರ ಸುನೀಲ್ ಮತ್ತು ಅವರ ಪತ್ನಿ ಕೋಸಾಂವ್ ಸುನಿಲ್ ಲೋಬೊ ಅವರಿಗೆ ಲಂಡನ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

ಈ ಭರವಸೆಯ ಮೇರೆಗೆ ಆರೋಪಿತರು ಒಟ್ಟು 17.45 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡಿದ್ದು, ಯಾವುದೇ ಉದ್ಯೋಗ ಒದಗಿಸಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಪಡೆದ ಹಣದಲ್ಲಿ 2.79 ಲಕ್ಷ ರೂಪಾಯಿಯನ್ನು ಹಿಂದಿರುಗಿಸಿದ್ದು, ಉಳಿದ 14.66 ಲಕ್ಷ ರೂಪಾಯಿಯನ್ನು ಮರಳಿಸಿಲ್ಲ ಎನ್ನಲಾಗಿದೆ. ಅಲ್ಲದೆ, ದೂರುದಾರರಿಂದ ಖರ್ಚು ಮಾಡಿಸಿದ 1.50 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 16.16 ಲಕ್ಷ ರೂಪಾಯಿ ಹಣವನ್ನು ವಾಪಸ್ ನೀಡದೆ ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.