ಮಂಗಳೂರು: ನಗರದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಲ್ಪಾಡಿ ಅಲ್ಕೈರ್ ಶಾಲೆಯ ಎದುರು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 52 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತರನ್ನು ಮಹಮ್ಮದ್ ಅಶ್ರಫ್ (52) ಎಂದು ಗುರುತಿಸಲಾಗಿದೆ. ಇವರು ದಿನಾಂಕ 14.10.2026ರಂದು ಸಂಜೆ ಸುಮಾರು 6.45ರ ವೇಳೆಗೆ ಸೂರಲ್ಪಾಡಿ ಅಲ್ಕೈರ್ ಶಾಲೆಯ ಎದುರು ಹೆದ್ದಾರಿ ದಾಟಲು ಸರ್ವೀಸ್ ರಸ್ತೆಯ ಬಳಿ ನಿಂತುಕೊಂಡಿದ್ದರು.
ಈ ವೇಳೆ ಕೈಕಂಬ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನದ ಸವಾರನು ಪಾದಚಾರಿಯನ್ನು ಗಮನಿಸದೆ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಮಹಮ್ಮದ್ ಅಶ್ರಫ್ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ಬಳಿಕ ವಾಹನ ನಿಲ್ಲಿಸದೆ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದಿಂದ ಅಶ್ರಫ್ ಅವರ ಮುಖಕ್ಕೆ ತೀವ್ರ ರಕ್ತಗಾಯವಾಗಿದ್ದು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 15.10.2026ರಂದು ಬೆಳಗಿನ ಜಾವ 2.51ರ ಸುಮಾರಿಗೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಅಪಘಾತ ಎಸಗಿ ಪರಾರಿಯಾದ ದ್ವಿಚಕ್ರ ವಾಹನದ ಸವಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೃತರ ಭಾವ ಮಹಮ್ಮದ್ ಝಾಯಿದ್ ಅವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.


