Home Latest ಕಂಬಳದ ಕ್ಷೇತ್ರದ ದಂತಕಥೆ :‌ ನಂದಳಿಕೆ “ಪಾಂಡು” ಇನ್ನು ನೆನಪು ಮಾತ್ರ…!!

ಕಂಬಳದ ಕ್ಷೇತ್ರದ ದಂತಕಥೆ :‌ ನಂದಳಿಕೆ “ಪಾಂಡು” ಇನ್ನು ನೆನಪು ಮಾತ್ರ…!!

ಉಡುಪಿ: ಕಂಬಳ ಕರೆಯಲ್ಲಿ ತನ್ನ ಮಿಂಚಿನ ಓಟದ ಮೂಲಕ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿದ್ದ ಉಡುಪಿ ಜಿಲ್ಲೆಯ ನಂದಳಿಕೆ ಪ್ರಸಿದ್ಧ ಕಂಬಳದ ಕೋಣ ‘ಪಾಂಡು’ ಸೆಪ್ಟೆಂಬರ್ 28 ರ ಮುಂಜಾನೆ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದೆ.

ನಂದಳಿಕೆ ಶ್ರೀಕಾಂತ್ ಭಟ್ ಅವರ ಕುಟುಂಬದ ಸದಸ್ಯನಂತಿದ್ದ ಪಾಂಡು, ಸುಮಾರು 8 ವರ್ಷಗಳ ಕಾಲ ಅಪ್ರತಿಮ ಚಾಂಪಿಯನ್ ಆಗಿ ಮೆರೆದು 150ಕ್ಕೂ ಹೆಚ್ಚು ಚಿನ್ನ-ಬೆಳ್ಳಿ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಕೆಲವು ದಾಖಲೆಗಳ ಪ್ರಕಾರ ಇದು *203 ಕ್ಕೂ ಅಧಿಕ ಪದಕ ಗೆದ್ದಿದ್ದು, ಜೋಡುಕರೆ ಕಂಬಳದ ಇತಿಹಾಸದಲ್ಲೇ ಅತೀ ಹೆಚ್ಚು ಪದಕ ಗೆದ್ದ ಕೋಣ ಎಂಬ ದಾಖಲೆ ಮಾಡಿದೆ. fa9c0451

ಪಾಂಡುವಿನ ವಿಶೇಷತೆಗಳು:
23 ವರ್ಷದ ಹಿರಿಯ ಕೋಣ, ಹಗ್ಗ ವಿಭಾಗದಲ್ಲಿ ವೇಗದ ಓಟಕ್ಕೆ ಹೆಸರಾಗಿತ್ತು- ಎಡಕ್ಕೂ ಬಲಕ್ಕೂ ಸಮಾನವಾಗಿ ಓಡುವ ಅಪರೂಪದ ಗುಣ ಹೊಂದಿತ್ತು.ಅತ್ತೂರು ಕಾಟಿ, ಚಾಂಪಿಯನ್ ಕುಟ್ಟಿ, ಕೊಳಚೂರು ಚೆನ್ನ ಸೇರಿದಂತೆ ದಿಗ್ಗಜ ಕೋಣಗಳ ಜೊತೆಗೂಡಿ ಹಲವು ಸ್ವರ್ಣ ಪದಕ ಗೆದ್ದಿತ್ತು.”ಪಾಪಾ ಪಾಂಡು” ಧಾರಾವಾಹಿ ಜನಪ್ರಿಯವಾಗಿದ್ದ ಸಮಯದಲ್ಲಿ ಹುಟ್ಟಿದ್ದರಿಂದ ‘ಪಾಂಡು’ ಎಂದು ಹೆಸರಿಡಲಾಗಿತ್ತು.ಕಾರ್ಕಳದ ಜೀವನ್ ದಾಸ್ ಅಡ್ಯಂತಾಯರ ಮನೆಯಲ್ಲಿ ಕಂಬಳ ಜೀವನ ಆರಂಭಿಸಿ, ಅತ್ತೂರು ಮನ್ಮಥ ಶೆಟ್ಟಿ, ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಬಳಿಕ ನಂದಳಿಕೆ ಹಟ್ಟಿಗೆ ಬಂದಿತ್ತು.

ಕಾಲಿನಲ್ಲಿ ಹುಟ್ಟಿನಿಂದಲೇ 70 ಡಿಗ್ರಿ ತಿರುಗಿದ ನ್ಯೂನತೆ ಇದ್ದರೂ ಅದರ ಓಟದ ವೇಗಕ್ಕೆ ಅಡ್ಡಿಯಾಗಿರಲಿಲ್ಲ. ಸುಮಾರು ಮೂರು ವರ್ಷಗಳ ಹಿಂದೆ ಹೊಕ್ಕಾಡಿಗೋಳಿ ಕಂಬಳದಲ್ಲಿ ಕೊನೆಯ ಬಾರಿಗೆ ಪದಕ ಗೆದ್ದು ನಂತರ ನಿವೃತ್ತಿ ಜೀವನದಲ್ಲಿತ್ತು.

ಪಾಂಡುವಿನ ಅಗಲಿಕೆಯಿಂದ ಕಂಬಳ ಕ್ಷೇತ್ರದಲ್ಲಿ ಶೋಕದ ಛಾಯೆ ಆವರಿಸಿದೆ.