ಉಡುಪಿ: ಕೋಟ್ಯಂತರ ರೂ. ಅಗ್ರಿಗೋಲ್ಡ್ ವಂಚನೆ ಪ್ರಕರಣದಲ್ಲಿ ಹಣ ವಾಪಸ್ ಸಿಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ನೂರಾರು ಸಂತ್ರಸ್ತರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುಗಿಬಿದ್ದ ಘಟನೆ ಅ.28 ರಂದು ನಡೆದಿದೆ.
ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡ ಸಂತ್ರಸ್ತರ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಎಸ್ಪಿ ಕಚೇರಿಯಲ್ಲಿ ಕೈಗೊಳ್ಳಲಾಗಿದೆ. ಆಂಧ್ರಪ್ರದೇಶ ಸಿಐಡಿ ಹಾಗೂ ಕರ್ನಾಟಕ ಸಿಐಡಿ ಜಂಟಿಯಾಗಿ ರಾಜ್ಯದ 9 ಕೇಂದ್ರಗಳಲ್ಲಿ ಅ.27 ರಿಂದ ದಾಖಲೆ ಪರಿಶೀಲನೆ ಆರಂಭಿಸಿದೆ. ಉಡುಪಿ ಕೇಂದ್ರವು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಂತ್ರಸ್ತರಿಗೆ ನಿಗದಿಯಾಗಿದೆ.
ದಿನವೊಂದಕ್ಕೆ 150 ಮಂದಿಯ ದಾಖಲೆ ಸಂಗ್ರಹಿಸಲು ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಹಣ ವಾಪಸ್ ಸಿಗಲಿದೆ ಎಂಬ ಸುದ್ದಿ ವಾಟ್ಸಾಪ್ನಲ್ಲಿ ಹರಡುತ್ತಿದ್ದಂತೆ ನೂರಾರು ಮಹಿಳಾ ಸಂತ್ರಸ್ತೆಯರು ಸೇರಿದಂತೆ ಅನೇಕರು ಏಕಕಾಲಕ್ಕೆ ಕಚೇರಿಗೆ ಧಾವಿಸಿದ್ದಾರೆ. ಟೋಕನ್ ಪಡೆಯಲು ನೂಕುನುಗ್ಗಲು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರು ಸಂತ್ರಸ್ತರನ್ನು ಸಮಾಧಾನಪಡಿಸಿ ದಾಖಲೆ ಸಂಗ್ರಹ ಪ್ರಕ್ರಿಯೆಯ ಬಗ್ಗೆ ಮನವರಿಕೆ ಮಾಡಿದ್ದಾರೆ.
ತರಬೇಕಾದ ದಾಖಲೆಗಳು: ಮೂಲ ಅಗ್ರಿಗೋಲ್ಡ್ ಬಾಂಡ್, ನಗದು ರಸೀದಿ, ಅದರ ಸ್ವಯಂ ದೃಢೀಕೃತ ಕಲರ್ ಝೆರಾಕ್ಸ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಝೆರಾಕ್ಸ್, ಪಾಸ್ಪೋರ್ಟ್ ಸೈಜ್ ಫೋಟೋ.
ಸದ್ಯ ಈ ಪರಿಶೀಲನೆ ತಕ್ಷಣದ ಹಣ ಪಾವತಿಯ ಖಾತರಿ ಅಲ್ಲ, ಮುಂದಿನ ಕಾನೂನು ಪ್ರಕ್ರಿಯೆಗೆ ದಾಖಲೆ ಸಂಗ್ರಹ ಎಂದು ಸಿಐಡಿ ಸ್ಪಷ್ಟಪಡಿಸಿದೆ.





