ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮಂಗಳವಾರ ಸಂಜೆ ಭೀಕರ ದುರಂತ ಸಂಭವಿಸಿದೆ. ಮೀನುಗಾರಿಕಾ ಬೋಟ್‌ನ ಟ್ಯಾಂಕ್ ಸ್ವಚ್ಛಗೊಳಿಸುವಾಗ ವಿಷಕಾರಿ ಅನಿಲ ಸೇವಿಸಿ ಉಸಿರುಗಟ್ಟಿ ಮೂವರು ಮೀನುಗಾರರು ದಾರುಣವಾಗಿ ಮೃತಪಟ್ಟಿದ್ದಾರೆ.
ಮೃತರನ್ನು ನೌಶಾದ್ (48), ಅಮೀನ್ (40) ಮತ್ತು ಅಮನ್ (26) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಅಸ್ವಸ್ಥಗೊಂಡ ಅಬ್ದುಲ್ ಯಾಕುಬ್ ದಾಡಿಯಾ (60) ಅವರನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ:
ತದಡಿ ಬಂದರಿನಲ್ಲಿ ಲಂಗರು ಹಾಕಿದ್ದ ‘ಕುಚೈಮಾ’ ಎಂಬ ಮೀನುಗಾರಿಕಾ ಬೋಟ್‌ನಲ್ಲಿ ಈ ದುರಂತ ನಡೆದಿದೆ. ಮೀನುಗಾರರು ಸಮುದ್ರದಿಂದ ‘ಚಮನ್’ ತಳಿಯ ಮೀನುಗಳನ್ನು ಹಿಡಿದು ಬಂದರಿಗೆ ಮರಳಿದ್ದರು. ಮೀನುಗಳನ್ನು ಖಾಲಿ ಮಾಡಿದ ಬಳಿಕ ಬೋಟ್‌ನ ಮೀನು ಸಂಗ್ರಹಣಾ ಟ್ಯಾಂಕ್ (Fish Hold) ಅನ್ನು ಸ್ವಚ್ಛಗೊಳಿಸಲು 5 ಜನ ಕೆಳಗಿಳಿದಿದ್ದರು.
ಈ ವೇಳೆ ಟ್ಯಾಂಕ್‌ನಲ್ಲಿ ಕೊಳೆತ ಮೀನಿನ ತ್ಯಾಜ್ಯದಿಂದ ಉಂಟಾದ ವಿಷಕಾರಿ ಅನಿಲ ಹಾಗೂ ತೀವ್ರ ದುರ್ವಾಸನೆಯಿಂದಾಗಿ ಉಸಿರುಗಟ್ಟಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರನ್ನು ಸಹ-ಮೀನುಗಾರರು ತಕ್ಷಣ ರಕ್ಷಿಸಿದ್ದಾರೆ, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






