ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಬೈಕಾಡಿಯಲ್ಲಿ ಮಂಗಳವಾರ ರಾತ್ರಿ ನಡೆದ ರೌಡಿಶೀಟರ್ ಸುಜಿತ್ ಪಿಂಟೊ (43) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೈಕಾಡಿ ನಿವಾಸಿಗಳಾದ ಪ್ರಮೋದ್ ಪೂಜಾರಿ ಮತ್ತು ಆತನ ಸಹೋದರ ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ. ಪ್ರಮೋದ್ ಗಾರೆ ಕೆಲಸಗಾರ ಹಾಗೂ ಪ್ರದೀಪ್ ರಿಕ್ಷಾ ಚಾಲಕ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ:
ಉಡುಪಿ ಸಂತೆಕಟ್ಟೆಯಲ್ಲಿ ವಾಸವಿದ್ದ ಸುಜಿತ್ ಪಿಂಟೊ ಐದು ವರ್ಷಗಳ ಹಿಂದೆ ಬೈಕಾಡಿಗೆ ಶಿಫ್ಟ್ ಆಗಿದ್ದ. ಈ ಹಿಂದೆ ಒಂದೇ ತಂಡವಾಗಿದ್ದ ಇವರು ಕುಡಿದು ಗಲಾಟೆ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸುಜಿತ್ ಪಿಂಟೊ ಸಹೋದರರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದೇ ದ್ವೇಷದಿಂದ ಮಂಗಳವಾರ ರಾತ್ರಿ ಬೈಕಾಡಿ ಸರ್ಕಲ್ ಬಳಿ ಬರಲು ಹೇಳಿದ್ದರು.
ಅದರಂತೆ ಸಹೋದರರಿಬ್ಬರು, ಸುಜಿತ್ ಪಿಂಟೊ ಮತ್ತು ಆತನ ಗೆಳೆಯ ಜೀವನ್ ಸ್ಥಳಕ್ಕೆ ಬಂದಾಗ ಮಾತಿಗೆ ಮಾತು ಬೆಳೆದಿದೆ. ಆಗ ಪ್ರಮೋದ್ ಪೂಜಾರಿ ಕಬ್ಬಿಣದ ರಾಡ್ನಿಂದ ಸುಜಿತ್ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಮಾಹಿತಿ ಪ್ರಕಾರ ಹಣಕಾಸಿನ ವಿಚಾರವೂ ಕಾರಣವಾಗಿತ್ತು. ಸುಜಿತ್ ಮನೆಗೆ ಸಾಮಗ್ರಿ ಪೂರೈಸುತ್ತಿದ್ದ ಪ್ರಮೋದ್ಗೆ ಹಣ ಬಾಕಿ ಇತ್ತು, ಅದೇ ವಿಚಾರಕ್ಕೆ ಜಗಳ ನಡೆದಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಸುಜಿತ್ ಪಿಂಟೊ ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. 2018ರ ಮಣಿಪಾಲದ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಮತ್ತು 2020ರ ತೆಂಕನಿಡಿಯೂರು ಲಕ್ಷ್ಮಿನಗರದ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಮೋದ್ ಪೂಜಾರಿ ಮೊದಲು ಪೊಲೀಸರಿಗೆ ಶರಣಾಗಿದ್ದ, ನಂತರ ಪರಾರಿಯಾಗಿದ್ದ ಸಹೋದರ ಪ್ರದೀಪ್ನನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






