ಮಂಗಳೂರು: ಕಣ್ಣೂರಿನ ಮಸೀದಿ ಹಿಂಭಾಗದ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮವಾಗಿ ಮರಳು ಕಳವು ಮಾಡಿ ಸಾಗಾಟಕ್ಕೆ ಸಿದ್ಧತೆ ನಡೆಸುತ್ತಿದ್ದ ಪ್ರಕರಣವನ್ನು ಕಂಕನಾಡಿ ಟೌನ್ ಪೊಲೀಸರು ಪತ್ತೆಹಚ್ಚಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ವಿನಾಯಕ ಭಾವಿಕಟ್ಟೆ ಹಾಗೂ ಸಿಬ್ಬಂದಿ ಬೆಳಗಿನ ಜಾವ 5 ಗಂಟೆಗೆ ಸ್ಥಳಕ್ಕೆ ತೆರಳಿದಾಗ, ದೋಣಿಯಿಂದ ಮರಳನ್ನು ಟಿಪ್ಪರ್ ಲಾರಿಗಳಿಗೆ ತುಂಬಿಸಲು ಸಿದ್ಧತೆ ನಡೆಸುತ್ತಿರುವುದು ಕಂಡುಬಂದಿದೆ.
ಪೊಲೀಸರನ್ನು ಕಂಡು ದೋಣಿಯಲ್ಲಿದ್ದವರು ಹಾಗೂ ಕೆಲ ಟಿಪ್ಪರ್ ಚಾಲಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳದಲ್ಲಿದ್ದ KA-19-AD-8645, KA-19-AE-5452, KA-21-C-5112 ಹಾಗೂ KA-19-AD-7207 ನೋಂದಣಿ ಸಂಖ್ಯೆಯ ನಾಲ್ಕು ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ ಮೊಹಮ್ಮದ್ ಆಯೂಬ್ ಹಾಗೂ ಮೊಹಮ್ಮದ್ ಆಸೀಫ್ ಎಂಬ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ವಿಚಾರಣೆ ವೇಳೆ ನೇತ್ರಾವತಿ ನದಿಯಿಂದ ಮರಳನ್ನು ಅಕ್ರಮವಾಗಿ ಕಳವು ಮಾಡಿ, ಸರ್ಕಾರಕ್ಕೆ ರಾಜಧನ ಪಾವತಿಸದೆ ಸಾಗಾಟ ಮಾಡಲು ಸಿದ್ಧತೆ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ನಾಲ್ಕು ಟಿಪ್ಪರ್ ಲಾರಿಗಳು, ಎರಡು ಮೊಬೈಲ್ ಫೋನ್‌ಗಳು ಹಾಗೂ ಮೂರು ಕಬ್ಬಿಣದ ಮೆಟ್ಟಿಲುಗಳ ಸ್ಟ್ಯಾಂಡ್‌ಗಳನ್ನು ವಶಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ₹18.27 ಲಕ್ಷ ಎಂದು ತಿಳಿಸಲಾಗಿದೆ.
ಪ್ರಕರಣದಲ್ಲಿ ಟಿಪ್ಪರ್ ವಾಹನಗಳ ಚಾಲಕರು ಮತ್ತು ಮಾಲೀಕರು ಹಾಗೂ ಮರಳು ಸಾಗಾಟಕ್ಕೆ ಬಳಸಿದ ದೋಣಿಯ ಚಾಲಕರು ಮತ್ತು ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲಾಗಿದೆ.



