ಹಿರಿಯಡ್ಕ: ಹುಬ್ಬಳ್ಳಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ರಾಘವೇಂದ್ರ ಶೆಟ್ಟಿ (45) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಕ್ಕೆಹಳ್ಳಿ ಗ್ರಾಮದ ಜಡ್ಡು ಮೇಲ್ಮನೆ ಸಮೀಪದ ಹಾಡಿಯಲ್ಲಿ ನಡೆದಿದೆ.
ಮೃತರು ಮೂಲತಃ ಬೇಳೂರು ಗ್ರಾಮ, ಕುಂದಾಪುರದವರು. ಪತ್ನಿ ಸುನೀತಾ ಮತ್ತು ಮಗಳು ಮೌಲ್ಯಾ ಜೊತೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದು, ಹೋಟೆಲ್ ವ್ಯವಹಾರ ಮಾಡುತ್ತಿದ್ದರು. ಪತ್ನಿ ಒಂದು ವಾರದ ಹಿಂದೆ ತಾಯಿ ಮನೆ ಹಾವಂಜೆ ಗ್ರಾಮಕ್ಕೆ ಬಂದಿದ್ದರು.
ಅ.19 ರಂದು ಬೆಳಿಗ್ಗೆ 11 ಗಂಟೆಗೆ ಸುನೀತಾ ಪತಿಗೆ ಕರೆ ಮಾಡಿ ಹುಬ್ಬಳ್ಳಿಗೆ ಬರಲು ಟಿಕೆಟ್ ಬುಕ್ ಮಾಡಲು ಹೇಳಿದ್ದರು. ನಂತರ ಎಷ್ಟು ಕರೆ ಮಾಡಿದರೂ ರಾಘವೇಂದ್ರ ಕರೆ ಸ್ವೀಕರಿಸಿರಲಿಲ್ಲ. ಅನುಮಾನಗೊಂಡು ಸಹೋದರ ರಾಜ ಶೆಟ್ಟಿ ಅವರಿಗೆ ತಿಳಿಸಿದ್ದಾರೆ. ಅವರೂ ಕರೆ ಮಾಡಿದರೂ ಸಂಪರ್ಕ ಸಿಗದ ಹಿನ್ನೆಲೆಯಲ್ಲಿ ಅ.20 ರಂದು ಬೆಳಿಗ್ಗೆ 8 ಗಂಟೆಯಿಂದ ಹುಡುಕಾಟ ನಡೆಸಿದಾಗ ಸಂಜೆ 3 ಗಂಟೆಗೆ ಕುಕ್ಕೆಹಳ್ಳಿ ಬಳಿ ಅವರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅತಿಯಾದ ಸಾಲ ಮತ್ತು ಆರ್ಥಿಕ ಸಂಕಷ್ಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 36/2026 ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



