ಉಡುಪಿ: ನಾಸಿಕ್ನಿಂದ ಚಿಕ್ಕಮಗಳೂರು ಜಿಲ್ಲೆಯ ಮೆಣಸೆಗೆ ಪ್ರಯಾಣಿಸುತ್ತಿದ್ದ 29 ವರ್ಷದ ಮಹಿಳೆ ಹಾಗೂ ಅವರ ಮೂರು ವರ್ಷದ ಮಗು ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರನ್ನು ಕಾವ್ಯ (29) ಹಾಗೂ ಅವರ ಪುತ್ರ ಶಿವಾಂಷ್ (3) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 23ರಂದು ನಾಸಿಕ್ನಿಂದ ರೈಲಿನಲ್ಲಿ ಉಡುಪಿಗೆ ಬಂದಿದ್ದ ಇವರು, ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಮೆಣಸೆಗೆ ತೆರಳಲು ಸಿದ್ಧರಾಗಿದ್ದರು.
ಈ ವೇಳೆ ಕಾವ್ಯ ಅವರು ತಮ್ಮೊಂದಿಗೆ ಇದ್ದ ಸಂಬಂಧಿಕರೊಬ್ಬರನ್ನು ಟೀ ಕುಡಿದು ಬರುವಂತೆ ಹೋಟೆಲ್ಗೆ ಕಳುಹಿಸಿದ್ದಾರೆ. ಸಂಬಂಧಿಕರು ಟೀ ಕುಡಿದು ವಾಪಸ್ ಬಂದಾಗ ಕಾವ್ಯ ಹಾಗೂ ಮಗು ಸ್ಥಳದಲ್ಲಿ ಇರಲಿಲ್ಲ. ಬಳಿಕ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕಾವ್ಯ ಅವರ ಚಹರೆ: ಸುಮಾರು 4 ಅಡಿ 10 ಇಂಚು ಎತ್ತರ, ಕಪ್ಪು ಕೂದಲು, ಸಾಧಾರಣ ಶರೀರ ಹಾಗೂ ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದಾರೆ. ನಾಪತ್ತೆಯಾಗುವಾಗ ಹಳದಿ ಬಣ್ಣದ ಹೂಗಳಿರುವ ಟಾಪ್ ಮತ್ತು ನೀಲಿ ಬಣ್ಣದ ಜೀನ್ಸ್ ಧರಿಸಿದ್ದರು. ಮಹಿಳೆ ಹಾಗೂ ಮಗುವಿನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಉಡುಪಿ ನಗರ ಪೊಲೀಸರಿಗೆ ಮಾಹಿತಿ ನೀಡಿ ಪತ್ತೆ ಕಾರ್ಯಕ್ಕೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.




