ಸಿದ್ದಾಪುರ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಬಿದ್ದು ದಂಪತಿ ಹಾಗೂ ನಾಲ್ಕು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಬಾಣಂಗಾಲದಲ್ಲಿ ರಾತ್ರಿ ನಡೆದಿದೆ.
ಸಾವನ್ನಪ್ಪಿದವರು ಸಿದ್ದಾಪುರದ ಹೈಸ್ಕೂಲ್ ಪೈಸರಿ ನಿವಾಸಿ ವಿಜೇಶ್ (36), ಅವರ ಪತ್ನಿ ಪಮಿತ (34) ಹಾಗೂ ನಾಲ್ಕು ವರ್ಷದ ಪುತ್ರಿ ಲಿಯಾ ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ ಸಿದ್ದಾಪುರದಿಂದ ಬಾಣಂಗಾಲ ಗ್ರಾಮದತ್ತ ಕುಟುಂಬ ಸಮೇತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕೆರೆಗೆ ಉರುಳಿ ಬಿದ್ದಿದ್ದು, ಕಾರಿನಲ್ಲಿದ್ದ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿದೆ.
ಬುಧವಾರ ತೋಟದ ಕಾರ್ಮಿಕರು ಕೆರೆಯಲ್ಲಿ ಕಾರು ಮುಳುಗಿರುವುದನ್ನು ಗಮನಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕಾರನ್ನು ಹೊರತೆಗೆದು ಪರಿಶೀಲಿಸಿದಾಗ ಅದರೊಳಗೆ ದಂಪತಿ ಹಾಗೂ ಮಗುವಿನ ಮೃತದೇಹಗಳು ಪತ್ತೆಯಾಗಿವೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸಿದ್ದಾಪುರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಹಾಗೂ ಕಾನೂನು ಕ್ರಮ ಕೈಗೊಂಡಿದ್ದಾರೆ.
ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





