ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಶಾನ್ಕಟ್ಟು ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ಅಕ್ಟೋಬರ್ 14ರಂದು ನಡೆದಿದೆ.
ಮೃತರನ್ನು ಶಾನ್ಕಟ್ಟು ನಿವಾಸಿ ಉದಯ ಕುಮಾರ್ ಶೆಟ್ಟಿ (52) ಎಂದು ಗುರುತಿಸಲಾಗಿದೆ. ಇವರು ತಮ್ಮ ತಾಯಿ ಲಲಿತಾ ಶೆಟ್ಟಿ ಹಾಗೂ ತಂಗಿ ಪುಪ್ಪಲತಾ ಶೆಟ್ಟಿ ಅವರೊಂದಿಗೆ ಮನೆಯಲ್ಲಿ ವಾಸವಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದರು. ಉದಯ ಕುಮಾರ್ ಶೆಟ್ಟಿ ಅವರಿಗೆ ಈವರೆಗೆ ವಿವಾಹವಾಗಿರಲಿಲ್ಲ ಎನ್ನಲಾಗಿದ್ದು, ತಾಯಿಯ ನಂತರ ತಮ್ಮ ಜೀವನದ ಗತಿಯೇನು ಎಂಬ ಚಿಂತೆಯಿಂದ ನೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 14ರಂದು ಬೆಳಿಗ್ಗೆ 11:30ರಿಂದ ಮಧ್ಯಾಹ್ನ 1:20ರ ನಡುವಿನ ಅವಧಿಯಲ್ಲಿ ಮನೆಯ ತೋಟದಲ್ಲಿದ್ದ ಗೊಬ್ಬರದ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ. ತಕ್ಷಣ ನೆರೆಹೊರೆಯವರ ಸಹಾಯದಿಂದ ಅವರನ್ನು ಕೆಳಗಿಳಿಸಿ, ಅಂಬ್ಯುಲೆನ್ಸ್ ಮೂಲಕ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 27/2026ರಂತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



