ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡಿನ ಫ್ಲೈಓವರ್ ಅಡಿಭಾಗದಲ್ಲಿ ನಿಲ್ಲಿಸಿದ್ದ ಬುಲೆಟ್ ಬೈಕ್ ಕಳವಾದ ಘಟನೆಗೆ ಸಂಬಂಧಿಸಿದಂತೆ ಇದೀಗ ಒಂದು ವಾರದ ಬಳಿಕ ಕಳವಾದ ಬೈಕ್ ಗಡಿಪ್ರದೇಶ ಮಂಜೇಶ್ವರದಲ್ಲಿ ಪತ್ತೆಯಾಗಿದ್ದು, ವಾರಸುದಾರರ ಕೈಗೆ ಮರಳಿದೆ.
ಈ ಘಟನೆ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ಪಣೋಲಿಬೈಲು ನಿವಾಸಿ ರಮೇಶ್ ಅವರಿಗೆ ಸೇರಿದ ಬುಲೆಟ್ ಬೈಕ್ ಬಿ.ಸಿ.ರೋಡು ಫ್ಲೈಓವರ್ ಅಡಿಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಬೈಕ್ ಕಾಣೆಯಾಗಿ, ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಆತಂಕಗೊಂಡಿದ್ದ ವಾರಸುದಾರರಿಗೆ ಒಂದು ವಾರದ ಬಳಿಕ ಮಂಜೇಶ್ವರದಲ್ಲಿ ಬೈಕ್ ಪತ್ತೆಯಾಗಿದೆ. ಬಿ.ಸಿ.ರೋಡು ಫ್ಲೈಓವರ್ ಅಡಿಭಾಗದಲ್ಲಿ ದ್ವಿಚಕ್ರ ವಾಹನಗಳ ನಿಲ್ಲಿಸಿ ಮಂಗಳೂರು ಸೇರಿದಂತೆ ವಿವಿಧ ಕಡೆಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿದೆ. ಆದರೆ ಈ ಪ್ರದೇಶದಲ್ಲಿ ಪದೇ ಪದೆ ಬೈಕ್ ಕಳವು ಪ್ರಕರಣಗಳು ವರದಿಯಾಗುತ್ತಿರುವುದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ವಾಹನ ನಿಲ್ಲಿಸಿ ತೆರಳುವವರು ಮರಳಿ ಬರುವವರೆಗೆ ತಮ್ಮ ಬೈಕ್ ಸುರಕ್ಷಿತವಾಗಿರುತ್ತದೆಯೇ ಎಂಬ ಚಿಂತೆ ಎದುರಿಸುವಂತಾಗಿದೆ. ಅದರಲ್ಲೂ ಪೊಲೀಸ್ ಠಾಣೆಯ ಸಮೀಪದಲ್ಲೇ ಇಂತಹ ಕಳವು ಪ್ರಕರಣಗಳು ನಡೆಯುತ್ತಿರುವುದು ಆತಂಕದ ಸಂಗತಿ. ಫ್ಲೈಓವರ್ ಅಡಿಭಾಗದಲ್ಲಿ ವಾಹನಗಳ ಓಡಾಟ ಮತ್ತು ನಿಲುಗಡೆ ಹೆಚ್ಚಿದ್ದರೂ, ವಾಹನಗಳ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಸಿ.ಸಿ. ಟಿವಿ ಕ್ಯಾಮೆರಾಗಳ ಅಳವಡಿಕೆಯ ಬೇಡಿಕೆ ಇನ್ನೂ ಈಡೇರಿಲ್ಲ. ಈ ಪ್ರದೇಶದಲ್ಲಿ ಸೂಕ್ತ ನಿಗಾ ವ್ಯವಸ್ಥೆ ಕಲ್ಪಿಸಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.


