ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎಂಬ ಆರೋಪದಡಿ ಸರ್ಕಾರವು ಎಸ್ಐಟಿ ರಚನೆ ಮಾಡಿ ತನಿಖೆಯನ್ನು ನಡೆಸುತ್ತಿದೆ.
ಈಗಾಗಲೇ ತಿಂಗಳುಗಟ್ಟಲೆ ತನಿಖೆ ನಡೆದಿದ್ದು, ತನಿಖೆಯ ಮುಕ್ತಾಯದ ಹಂತ ತಲುಪಿದೆ. ಇದರ ನಡುವೆಯೇ ಇದೀಗ ಈ ಪ್ರಕರಣಕ್ಕೆ ಮಹಿಳಾ ಆಯೋಗ ಖಡಕ್ ಎಂಟ್ರಿ ಕೊಟ್ಟಿದೆ.
ಹೌದು, ಧರ್ಮಸ್ಥಳ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ) ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಜತೆಗೆ ಅಸಹಜ ಮತ್ತು ಅನುಮಾನಾಸ್ಪದ ಸಾವು ಪ್ರಕರಣಗಳ ಬಗ್ಗೆಯೂ ಸಮಗ್ರವಾಗಿ ತನಿಖೆಯನ್ನು ನಡೆಸಬೇಕೆಂದು ಕೋರಿ ರಾಜ್ಯ ಮಹಿಳಾ ಆಯೋಗವು ಎಸ್‍ಐಟಿ ಮುಖ್ಯಸ್ಥರಿಗೆ ಪತ್ರ ಬರೆದಿದೆ.
ಧರ್ಮಸ್ಥಳದಲ್ಲಿ ಕಳೆದ 20ಕ್ಕೂ, ಹೆಚ್ಚು ವರ್ಷಗಳಿಂದ ಗಂಭೀರ ಸ್ವರೂಪದ ದೌರ್ಜನ್ಯ, ಹತ್ಯೆ, ಅತ್ಯಾಚಾರ, ಅಸ್ವಾಭಾವಿಕ ಸಾವು ಮತ್ತು ನಾಪತ್ತೆ ಪ್ರಕರಣಗಳು ಕೇಳಿ ಬರುತ್ತಿವೆ. ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಈ ಹಿಂದೆ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿತ್ತು. ಅದಾದ ಬಳಿಕ ಎಸ್‌ಐಟಿ ರಚನೆಯಾಗಿದೆ. ಎಸ್‌ಐಟಿ ರಚನೆಯಾಗಬೇಕೆಂಬ ಕೋರಿಕೆಯ ಆಶಯವೂ ಮತ್ತು ಸರ್ಕಾರದ ಆದೇಶವೂ ಕೇವಲ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ:39/2025, ಕಲಂ 211 (ಎ), ಬಿಎನ್‌ಎಸ್ ಪ್ರಕರಣದ ತನಿಖೆಗೆ ಸೀಮಿತವಾಗಿರದೆ, ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣಗಳ ಸಮಗ್ರ’ ತನಿಖೆಯನ್ನು ಎಸ್‌ಐಟಿ ಮಾಡಬೇಕೆಂಬುದನ್ನು ಸೂಚಿಸುತ್ತದೆ. ಹೀಗಿದ್ದರೂ, ಈವರೆಗೆ ಎಸ್‌ಐಟಿ ಅಂತಹ ಪ್ರಕರಣಗಳನ್ನು ತನಿಖೆ ಮಾಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಕಂಡು ಬರುತ್ತಿಲ್ಲ ಎಂದು ಪತ್ರದಲ್ಲಿ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಉಲ್ಲೇಖಿಸಿದ್ದಾರೆ.
ಮಾಧ್ಯಮಗಳ ವರದಿಯನ್ನು ಗಮನಿಸಿದಾಗ ಎಸ್‍ಐಟಿ ರಚನೆಯಾದಾಗಿನಿಂದ ಕೇವಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ‘ಚಿನ್ನಯ್ಯ’ ಎಂಬ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ ಮಾನವ ಕಳೇಬರಹಗಳ ಉತ್ಖನನಕ್ಕೆ ಸೀಮಿತವಾಗಿ ಆತನ ಹೇಳಿಕೆಯ ಮಿತಿಯೊಳಗೆ ತನಿಖೆ ನಡೆದಿರುವುದು ಕಂಡುಬಂದಿದೆ. ಉತ್ಖನನದ ಸಂದರ್ಭದಲ್ಲಿ ದೊರೆತ ಅಸ್ಥಿಪಂಜರಗಳ ಅವಶೇಷಗಳ ಬಗ್ಗೆ, ಸಾವು ಸಂಭವಿಸಿದ ಕಾರಣದ ಬಗ್ಗೆ, ಅವುಗಳಲ್ಲಿ ಮಹಿಳೆಯರ ಅಸ್ಥಿಪಂಜರಗಳನ್ನು ಗುರುತಿಸುವ ಬಗ್ಗೆ, ಕಾಡಿನ ಪ್ರದೇಶದಲ್ಲಿ ಅಸ್ಥಿಪಂಜರ ದೊರೆಯಲು ಕಾರಣಗಳ ಬಗ್ಗೆ, ಮಾಹಿತಿ ಪತ್ತೆ ಹಚ್ಚುವ ಜೊತೆಗೆ, ಎಸ್‍ಐಟಿ ರಚನೆಯ ಆಯೋಗದ ಕೋರಿಕೆ ಮತ್ತು ನಂತರದ ಸರಕಾರದ ಆದೇಶಕ್ಕೆ ಅನುಗುಣವಾಗಿ ಎಸ್‍ಐಟಿಯು ಕೂಡಲೇ ಮಹಿಳೆಯರು ಮತ್ತು ಯುವತಿಯರ ನಾಪತ್ತೆ, ಅವರ ಅತ್ಯಾಚಾರ, ಕೊಲೆ ಪ್ರಕರಣಗಳನ್ನೂ ಸೇರಿದಂತೆ ಅಸಹಜ ಮತ್ತು ಅನುಮಾನಾಸ್ಪದ ಸಾವುಗಳು ಮತ್ತಿತರ ಪ್ರಕರಣಗಳ ಸಮಗ್ರ ತನಿಖೆಯನ್ನು ಕೈಗೊಳ್ಳುವಂತೆ ಅಥವಾ ಕೈಗೊಂಡಿದ್ದರೆ ಈ ಬಗ್ಗೆ ಮಾಹಿತಿಯನ್ನು ಆಯೋಗಕ್ಕೆ ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.



