Home Crime ಮಂಗಳೂರು: ಮೊಬೈಲ್ ನೋಡಲು ಕೊಡಲಿಲ್ಲವೆಂದು ಯುವಕನಿಗೆ ಚೂರಿ ಇರಿತ…!!

ಮಂಗಳೂರು: ಮೊಬೈಲ್ ನೋಡಲು ಕೊಡಲಿಲ್ಲವೆಂದು ಯುವಕನಿಗೆ ಚೂರಿ ಇರಿತ…!!

ಮಂಗಳೂರು, ಅ.13: ಮೊಬೈಲ್ ಫೋನ್ ನೋಡಲು ಕೊಡಲಿಲ್ಲ ಎಂಬ ಕಾರಣಕ್ಕೆ ಅಪರಿಚಿತ ವ್ಯಕ್ತಿ ಯುವಕನ ಮೇಲೆ ಚೂರಿಯಿಂದ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಘಟನೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಅ.11 ರಂದು ಸಂಜೆ 6:30ಕ್ಕೆ ದೂರುದಾರ Siraju B N ಅವರು ಸಿಟಿ ಸೆಂಟರ್ ನೋಡಲು ಬಂದು, ನಂತರ ರಾತ್ರಿ 10 ಗಂಟೆಗೆ ಲೇಡಿಗೋಶನ್ ಆಸ್ಪತ್ರೆ ಬಳಿಯ ಬಸ್ ಸ್ಟಾಪ್ ನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದಾಗ ಘಟನೆ ನಡೆದಿದೆ.

ಆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮಲೆಯಾಳಿ ಭಾಷೆಯಲ್ಲಿ “ಇಲ್ಲಿ ಏನು ಮಾಡುತ್ತಿದ್ದೀಯ” ಎಂದು ಕೇಳಿ, ಫೋನ್ ನೋಡಲು ಕೊಡು ಎಂದು ಕೇಳಿದ್ದಾನೆ. ದೂರುದಾರರು ಕೊಡುವುದಿಲ್ಲ ಎಂದಾಗ ಜಗಳ ಮಾಡಿ “ಫೋನ್ ಕೊಡದಿದ್ದರೆ ಜೀವಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ.

ಫೋನ್ ನೀಡದ ಕಾರಣ ಸಿಟ್ಟಿಗೆದ್ದ ಆರೋಪಿ ತನ್ನ ಬಳಿ ಇದ್ದ ಚೂರಿಯಿಂದ ಕುತ್ತಿಗೆಗೆ ಇರಿಯಲು ಯತ್ನಿಸಿದ್ದು, ದೂರುದಾರರು ತಪ್ಪಿಸಿಕೊಳ್ಳುವಾಗ ಚೂರಿ ಮೂಗಿನ ಎಡಭಾಗಕ್ಕೆ ತಾಗಿ ಮೂಗು ಹರಿದುಹೋಗಿದೆ. ಮತ್ತೆ ಇರಿಯಲು ಬಂದಾಗ ತಡೆಯಲು ಹೋದಾಗ ಬಲಗೈಗೆ ತಾಗಿ ಗಂಭೀರ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ನೋಡಿ ಸ್ಥಳದಲ್ಲಿ ಜನ ಸೇರಿದ್ದು, ಹಲ್ಲೆ ಮಾಡಿದವನ ಹೆಸರು ಇರ್ಷಾದ್ ಎಂದು ತಿಳಿದುಬಂದಿದೆ. ಗಾಯಗೊಂಡ ಸಿರಾಜು ಅವರನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಇರ್ಷಾದ್ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.