ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೆಂಜೂರು ಗ್ರಾಮದ ಶ್ರೇಯಾ ಜನರಲ್ ಸ್ಟೋರ್‌ನಲ್ಲಿ ಸರ್ಕಾರವು ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅಂಗಡಿಯ ಪಕ್ಕದ ಕೋಣೆಯಲ್ಲಿ ಅಕ್ಕಿ ಚೀಲಗಳು ಪತ್ತೆಯಾಗಿವೆ.
ಪರಿಶೀಲಿಸಿದಾಗ ಒಟ್ಟು 42 ಚೀಲಗಳಲ್ಲಿ 15 ಕ್ವಿಂಟಲ್ 20 ಕೆ.ಜಿ. 62 ಗ್ರಾಂ ಸರ್ಕಾರದ ಉಚಿತ ಪಡಿತರ ಅಕ್ಕಿ ಸಂಗ್ರಹಿಸಿರುವುದು ದೃಢಪಟ್ಟಿದ್ದು, ಇದರ ಅಂದಾಜು ಮೌಲ್ಯ ₹51,680 ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಡಿ ಮಾಲೀಕ ನಾಗರಾಜ ನಾಯ್ಕ್ ಅವರಲ್ಲಿ ಅಕ್ಕಿ ಸಂಗ್ರಹಿಸಿಟ್ಟುಕೊಳ್ಳಲು ಅಗತ್ಯ ದಾಖಲೆಗಳ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿ ಸಲ್ಲಿಸಲು ಸಾಧ್ಯವಾಗಿಲ್ಲ. ಅಕ್ಕಿಯನ್ನು ಎಲ್ಲಿಂದ ತಂದಿದ್ದಾರೆ ಎಂಬ ಪ್ರಶ್ನೆಗೂ ಸಮರ್ಪಕ ಉತ್ತರ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಅಧಿಕಾರಿಗಳು ಬ್ರಹ್ಮಾವರ ಪೊಲೀಸರ ಸಮ್ಮುಖದಲ್ಲಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆ ನಿಯಂತ್ರಣ ಆದೇಶದಡಿ ಪ್ರಕರಣ ದಾಖಲಿಸಲಾಗಿದೆ.




