ಮಂಗಳೂರು: ನಗರದ ಕೊಂಚಾಡಿಯ ಕರ್ನಾಟಕ ಬ್ಯಾಂಕ್ ಎದುರು ಸಾರ್ವಜನಿಕ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಹೊಡೆದಾಡಿಕೊಂಡು ಶಾಂತಿ ಭಂಗ ಉಂಟು ಮಾಡಿದ ಪ್ರಕರಣ ಕಾವೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ದಿನಾಂಕ 16.08.2026 ರಂದು ರಾತ್ರಿ 7.30ಕ್ಕೆ ಕೊಂಚಾಡಿ ಕರ್ನಾಟಕ ಬ್ಯಾಂಕ್ ಎದುರು ಇಬ್ಬರು ಹೊಡೆದಾಡುತ್ತಿದ್ದಾರೆ ಎಂಬ ಮಾಹಿತಿ ಪಿಸಿ ರಾಘವೇಂದ್ರ ಎಂ.ಎಚ್ ಮತ್ತು ಠಾಣಾ ಪ್ರಭಾರ ಎ.ಎಸ್.ಐ ಲೋಕನಾಥ್ ಅವರಿಗೆ ಲಭಿಸಿದೆ.
ಮಾಹಿತಿ ಬಂದ ತಕ್ಷಣ 7.45ಕ್ಕೆ ಇಲಾಖಾ ವಾಹನದಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಬ್ಯಾಂಕ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವೈಯಕ್ತಿಕ ವಿಚಾರಕ್ಕೆ ಅವಾಚ್ಯವಾಗಿ ಬೈದಾಡುತ್ತಿದ್ದರು. ಪರಸ್ಪರ ದೂಡಾಟ-ತಳ್ಳಾಟ ಮಾಡಿ ರಕ್ತಗಾಯವನ್ನೂ ಮಾಡಿಕೊಂಡಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದರು.
ಬಂಧಿತರು ಗೋಪಾಲ ಮಹಲ್ದಾರ್ ಹಾಗೂ ತಿಲಕ್ ರಾಜ್ ಎಂದು ಗುರುತಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಕಲಹ ಸೃಷ್ಟಿಸಿ ಶಾಂತಿ ಹಾಗೂ ನೆಮ್ಮದಿಗೆ ಭಂಗ ತಂದ ಹಿನ್ನೆಲೆಯಲ್ಲಿ ಇಬ್ಬರನ್ನೂ ಮುನ್ನೆಚ್ಚರಿಕೆ ಕ್ರಮವಾಗಿ ಕಾವೂರು ಪೊಲೀಸ್ ಠಾಣೆಗೆ ಕರೆತರಲಾಗಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




