Home Crime ಉಪ್ಪಿನಂಗಡಿ: ಗುಡ್ಡದಲ್ಲಿ ಅಕ್ರಮ ಕೋಳಿ ಅಂಕ ಜೂಜಾಟ – ಪೊಲೀಸರ ದಾಳಿ : ಓರ್ವನ ವಶಕ್ಕೆ…!!

ಉಪ್ಪಿನಂಗಡಿ: ಗುಡ್ಡದಲ್ಲಿ ಅಕ್ರಮ ಕೋಳಿ ಅಂಕ ಜೂಜಾಟ – ಪೊಲೀಸರ ದಾಳಿ : ಓರ್ವನ ವಶಕ್ಕೆ…!!

ಉಪ್ಪಿನಂಗಡಿ, ಅಕ್ಟೋಬರ್ 13: ಸಾರ್ವಜನಿಕ ಗುಡ್ಡದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.

ಅಕ್ಟೋಬರ್ 11ರ ಮಧ್ಯಾಹ್ನ 12 ಗಂಟೆಗೆ ಪಿಎಸ್ಐ ಸುತೇಶ್ ಕೆ.ಪಿ. ಅವರು ಇಲಾಖಾ ಜೀಪಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ನೆಕ್ಕರೆ ಸಾರ್ವಜನಿಕ ಗುಡ್ಡದಲ್ಲಿ ಕೋಳಿ ಅಂಕ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಬೀಟ್ ಅಧಿಕಾರಿಗೆ ಬಾತ್ಮೀದಾರರಿಂದ ಬಂದಿದೆ.

ಮಾಹಿತಿ ಮೇರೆಗೆ ಸಿಬ್ಬಂದಿ ಹಾಗೂ ಪಂಚರೊಂದಿಗೆ 1:35ಕ್ಕೆ ಸ್ಥಳಕ್ಕೆ ತೆರಳಿದ ಪೊಲೀಸರು ಕಣ್ಣಳತೆ ದೂರದಿಂದ ಗಮನಿಸಿದಾಗ ಸುಮಾರು 10 ಜನರ ಗುಂಪು ಕೋಳಿಗಳ ಕಾಲಿಗೆ ಬಾಲು (ಚೂರಿ) ಕಟ್ಟಿ ಹಿಂಸಾತ್ಮಕವಾಗಿ ಜೂಜಾಟ ನಡೆಸುತ್ತಿರುವುದು ಕಂಡುಬಂದಿದೆ.

ಪೊಲೀಸರು ದಾಳಿ ನಡೆಸುತ್ತಿದ್ದಂತೆ ಪೊಲೀಸ್ ಸಮವಸ್ತ್ರ ನೋಡಿ ಉಳಿದವರು ಓಡಿ ತಪ್ಪಿಸಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಸಿಬ್ಬಂದಿಯೊಬ್ಬರು ಗುಂಪಿನಲ್ಲಿದ್ದ ಗಣೇಶ್ ಎಂಬಾತನನ್ನು ಗುರುತಿಸಿದ್ದು, ಫೋನ್ ಕರೆ ಮಾಡಿ ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಿದಾಗ, ತಾನು ರಾಧಾ ಎಂಬ ವ್ಯಕ್ತಿಯೊಂದಿಗೆ ಜೂಜಾಟಕ್ಕೆ ಬಂದಿದ್ದು, ಇತರರ ಹೆಸರು ತಿಳಿದಿಲ್ಲ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 132/2026, ಕಲಂ 87, 93 ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಕಲಂ 3, 11(1)m(ii), 11(1)(n) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಮತ್ತು 112 BNS-2023 ರಂತೆ ಪ್ರಕರಣ ದಾಖಲಾಗಿದ್ದು, ಪರಾರಿಯಾದವರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.