ವಿಟ್ಲ, ಅಕ್ಟೋಬರ್ 13: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಮಾಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ ಆಯೋಜಿಸಿದ್ದ ಅಂಡರ್-18 ಕ್ರಿಕೆಟ್ ಪಂದ್ಯಾಟದಲ್ಲಿ ಸ್ಕೋರ್ ವಿಚಾರವಾಗಿ ಮಾತಿನ ಚಕಮಕಿ ನಡೆದು ಅಂಪೈರ್ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ.
ಹಲ್ಲೆಗೊಳಗಾದವರು ರಿಜ್ವಾನ್ (22), ಹಳೀರ ಮನೆ, ಮಾಣಿ ಗ್ರಾಮ, ಬಂಟ್ವಾಳ ತಾಲೂಕು. ಇವರು AKARS ಆಂಬುಲೆನ್ಸ್ ಚಾಲಕರಾಗಿದ್ದು, ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡುತ್ತಾರೆ.
ಅಕ್ಟೋಬರ್ 11ರ ಬೆಳಗ್ಗೆ 11 ಗಂಟೆಗೆ ಮಾಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ 18 ವರ್ಷದೊಳಗಿನ ಮಕ್ಕಳಿಗಾಗಿ 8 ತಂಡಗಳ ಆಹ್ವಾನಿತ ಕ್ರಿಕೆಟ್ ಪಂದ್ಯಾಟವನ್ನು ರಿಜ್ವಾನ್ ಮತ್ತು ಅವರ ಸ್ನೇಹಿತರಾದ ಶರೀಫ್, ನಶಾತ್ ಸೇರಿ ಆಯೋಜಿಸಿದ್ದರು. ಮಧ್ಯಾಹ್ನ 3:30ಕ್ಕೆ ಕ್ವಾಲಿಟಿ ಮಾಣಿ ಮತ್ತು GFC ಗಡಿಯಾರ ತಂಡಗಳ ನಡುವೆ ಪಂದ್ಯ ನಡೆಯುವಾಗ ಸ್ಕೋರ್ ವಿಚಾರಕ್ಕೆ ಎರಡು ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಗಡಿಯಾರ ತಂಡದ ಸಮ್ಮಾಸ್ ಎಂಬಾತ ನಶಾತ್‌ಗೆ ಅವಾಚ್ಯ ಶಬ್ದಗಳಿಂದ ಬೈದಾಗ, ರಿಜ್ವಾನ್ ಯಾಕೆ ಬೈಯುತ್ತಿದ್ದೀ ಎಂದು ಪ್ರಶ್ನಿಸಿದ್ದಾರೆ. ಆಗ ಸಮ್ಮಾಸ್ ಮತ್ತು ಆತನ ಇಬ್ಬರು ಸ್ನೇಹಿತರು ರಿಜ್ವಾನ್ ಅವರನ್ನು ಅಡ್ಡಗಟ್ಟಿ ತಡೆದು ಹಲ್ಲೆ ನಡೆಸಿದ್ದಾರೆ. ಸಮ್ಮಾಸ್ ತಲೆ ಮತ್ತು ಮುಖಕ್ಕೆ ಕೈಯಿಂದ ಹೊಡೆದಿದ್ದು, ಇಬ್ಬರು ಸ್ನೇಹಿತರು ಮುಖ ಮತ್ತು ಬಲ ಕಿವಿಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳದಲ್ಲಿದ್ದವರು ಜಗಳ ಬಿಡಿಸುವಾಗ ಸಮ್ಮಾಸ್ “ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ರಿಜ್ವಾನ್ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ 214/2026, ಕಲಂ 126(2), 352, 351(2), 115(2) ಜೊತೆಗೆ 3(5) BNS 2023 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



