ಕಾಪು, ಅಕ್ಟೋಬರ್ 13: ಉಡುಪಿ ಜಿಲ್ಲೆಯ ಕಟಪಾಡಿ ಸಮೀಪ ಕುಡಿತದ ಸಮಸ್ಯೆಯಿಂದ ಮನನೊಂದ ರಿಕ್ಷಾ ಚಾಲಕರೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತಪಟ್ಟವರು ಮೊಹಿದ್ದಿನ್ ಅಬುಬಕ್ಕರ್ ಬ್ಯಾರಿ (60), ಮೂಳೂರು ನಿವಾಸಿ, ಉಡುಪಿಯಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಅವರು ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರು. ಅಕ್ಟೋಬರ್ 12ರ ಬೆಳಗ್ಗೆ 8 ಗಂಟೆಗೆ ತಾಯಿಯ ಮನೆ ಬಳಿ ಬಂದು ಸ್ಕೂಟರ್‌ಗೆ ಹಾನಿ ಮಾಡಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಶೇರ್ ಮಾಡಿದ್ದರು ಎಂದು ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.
ಮಧ್ಯಾಹ್ನ 11:30ಕ್ಕೆ ಕುಟುಂಬಸ್ಥರು ಹೋಗಿ ನೋಡಿದಾಗ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 34/2026, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.




