ಬೆಂಗಳೂರು: ಹೊಸಕೋಟೆ ಬಳಿ ಎರಡು ದಿನಗಳ ಹಿಂದೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ದಾರುಣವಾಗಿ ಮೃಕತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಕೆಎಸ್ ಆರ್ ಟಿಸಿ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಐವರು ಯುವಕರು ಮೃತಪಟ್ಟಿದ್ದಾರೆ.
ಇಂಡಿಕಾ ಕಾರಿನಲ್ಲಿದ್ದ ಐವರು ದುರ್ಮರಣ ಹೊಂದಿದ್ದು, ದೊಡ್ಡಬಳ್ಳಾಪುರದ ಹರ್ಷಿತ್, ನಿಖಿತ್ ಸೇರಿ ಇತರರು ಮೃತ ದುರ್ದೈವಿಗಳಾಗಿದ್ದಾರೆ. ತುಮಕೂರು ಕಡೆಯಿಂದ ಬರುತ್ತಿದ್ದ ಕಾರು ಡಿವೈಡರ್ ಜಂಪ್ ಮಾಡಿ ಬೆಂಗಳೂರು ಕಡೆಯಿಂದ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ಗೆ ಡಿಕ್ಕಿಯಾಗಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಐವರ ಮೃತದೇಹ ರವಾನೆ ಮಾಡಲಾಗಿದೆ. ಸಿನಿಮೀಯ ಸ್ಟೈನಲ್ಲಿ ಕಾರು ಪಲ್ಟಿಯಾಗಿ 45 ಪ್ರಯಾಣಿಕರಿದ್ದ ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದಿದೆ. ಬಸ್ನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ.
ಐವರು ಸ್ನೇಹಿತರು ಸೇರಿ ಇಂಡಿಕಾ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದರು. ತುಮಕೂರಿನಿಂದ ಬೆಂಗಳೂರಿನತ್ತ ಪ್ರಯಾಣ ಮಾಡುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಜಿಂದಾಲ್ ಬಳಿಯ ಫ್ಲೈ ಓವರ್ ಮೇಲೆ ಕಳೆದ ರಾತ್ರಿ 11.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಕಾರಿನಲ್ಲಿದ್ದ ಐವರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಜಖಂಗೊಂಡಿದ್ದು, ಬಸ್ ಮುಂಭಾಗ ಡ್ಯಾಮೇಜ್ ಆಗಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ 42 ಮಂದಿ ಪ್ರಯಾಣಿಕರಿಗೆ, ಯಾವುದೇ ಅಪಾಯವಾಗಿಲ್ಲ ಎಂದು ತಿಳಿಯಲಾಗಿದೆ.
ಮೃತಪಟ್ಟವರು ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಮತ್ತು ಧನುಷ್ (20) ಎಂದು ಗುರುತಿಸಲಾಗಿದೆ. ಇವರು ಎಲ್ಲರೂ ದೊಡ್ಡಬಳ್ಳಾಪುರ ನಿವಾಸಿಗಳಾಗಿದ್ದರು., ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೃತ ಹರ್ಷಿತ್ ರಾಜನಕುಂಟೆ ಸಾಯಿ ವಿದ್ಯಾ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದ್ವಿತೀಯ ವರ್ಷದ ಡಿಗ್ರಿ ಓದುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದರೆ, ಗಂಭೀರ ಗಾಯಗೊಂಡಿದ್ದ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರೂ ಮೃತಪಟ್ಟಿದ್ದಾರೆ.
ಸ್ನೇಹಿತರೆಲ್ಲಾ ಸೇರಿ ಔಟಿಂಗ್ ಹೋಗಿದ್ದರು ಎನ್ನಲಾಗಿದೆ. ಮನೆಯವರಿಗೆ ಹೇಳದೆ ಸ್ನೇಹಿತರ ಗ್ಯಾಂಗ್ ಜಾಲಿ ರೈಡ್ ಹೋಗಿದ್ದು, ವಾಪಾಸ್ ಆಗುವ ವೇಳೆ ದುರ್ಘಟನೆ ಸಂಭವಿಸಿದೆ. ಅತಿವೇಗವಾಗಿ ಕಾರು ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.




