Home Crime ಶಿವಮೊಗ್ಗ : ಲಂಚ ಸ್ವೀಕರಿಸುವ ವೇಳೆ ಇಬ್ಬರು ಲೋಕಾಯುಕ್ತ ಬಲೆಗೆ…!!

ಶಿವಮೊಗ್ಗ : ಲಂಚ ಸ್ವೀಕರಿಸುವ ವೇಳೆ ಇಬ್ಬರು ಲೋಕಾಯುಕ್ತ ಬಲೆಗೆ…!!

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನ ವಿಭಾಗದ ವಿಶೇಷ ಅಧಿಕಾರಿಯಾಗಿದ್ದು, ಶಿವಮೊಗ್ಗದ ಹಿಂದಿನ ಅಪರ ಜಿಲ್ಲಾಧಿಕಾರಿಯಾಗಿದ್ದ ಸಿದ್ದಲಿಂಗ ರೆಡ್ಡಿ ಹಾಗೂ ಗ್ರಾಮ ಸಹಾಯಕ ರಾಜೇಶ್ ಅವರು ₹40,000 ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ತಿಳಿಯಲಾಗಿದೆ.

ಓತಿಘಟ್ಟ ಗ್ರಾಮದ ನಿವಾಸಿ ಕೇಶವಮೂರ್ತಿ ಅವರು ತಮ್ಮ ಎರ್ಟಿಗಾ ಕಾರನ್ನು ಕಳೆದ ಎರಡು ವರ್ಷಗಳಿಂದ ಎನ್.ಹೆಚ್-206 ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಬಾಡಿಗೆಗೆ ನೀಡಿದ್ದರು.

2025ರ ನವೆಂಬರ್ ತಿಂಗಳ ಬಾಡಿಗೆ ಹಣದ ಚೆಕ್ ಬಿಡುಗಡೆ ಮಾಡಲು ಸಿದ್ದಲಿಂಗ ರೆಡ್ಡಿ ಅವರು ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೇಶವಮೂರ್ತಿ ಅವರು ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಫೆಬ್ರವರಿ 14ರ ಸಂಜೆ ಸಿದ್ದಲಿಂಗ ರೆಡ್ಡಿ ಅವರ ಸೂಚನೆಯಂತೆ ಹೊಳಲೂರು ನಾಡಕಚೇರಿಯ ಗ್ರಾಮ ಸಹಾಯಕ ರಾಜೇಶ್ ಅವರು ಶಿವಮೊಗ್ಗದ ನೆಹರೂ ಸ್ಟೇಡಿಯಂ ಸಮೀಪ ಕೇಶವಮೂರ್ತಿ ಅವರಿಂದ ₹40,000 ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ರಂಗೇ ಹಸ್ತ ಬಂಧಿಸಿದ್ದಾರೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಚಂದ್ರಶೇಖರ್ ಬಿ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪೊಲೀಸ್ ನಿರೀಕ್ಷಕರಾದ ಕೆ.ಪಿ. ರುದ್ರೇಶ್, ಗುರುರಾಜ್ ಮೈಲಾರ್, ವೀರಬಸಪ್ಪ ಎಲ್. ಕುಸಲಾಪುರ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.