ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ನಿವಾಸಿ ಮ್ಯಾಥ್ಯೂ ಎಂಬವರ ವಿರುದ್ಧ ಪರವಾನಗಿ ನಿಯಮ ಉಲ್ಲಂಘಿಸಿ ರೈಫಲ್‌ಗೆ ಬೈನಾಕುಲರ್ ಹಾಗೂ ಟೆಲಿಸ್ಕೋಪ್ ಅಳವಡಿಸಿದ ಆರೋಪದಡ ಪ್ರಕರಣ ದಾಖಲಾಗಿದೆ.ಮ್ಯಾಥ್ಯೂ ಅವರ ಹೆಸರಿನಲ್ಲಿ NPB ರೈಫಲ್ ಹೊಂದಿದ್ದು, ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬೆಳೆ ರಕ್ಷಣೆಗಾಗಿ ನೀಡಲಾಗಿರುವ ಈ ಆಯುಧ ಪರವಾನಗಿ 16-01-2028ರವರೆಗೆ ಊರ್ಜಿತದಲ್ಲಿದೆ.ಆರೋಪಿಯು ರೈಫಲ್ ಅನ್ನು ಕೋಟ ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಇಟ್ಟಿದ್ದರು. ಆಗಸ್ಟ್ 26ರಂದು ಉಡುಪಿ ಜಿಲ್ಲಾ ಸಶಸ್ತ್ರ ವಿಭಾಗದ ಸಿಬ್ಬಂದಿ ಠಾಣೆಗೆ ಆಗಮಿಸಿ, ಡೆಪಾಸಿಟ್‌ನಲ್ಲಿದ್ದ ಬಂದೂಕುಗಳ ಪರಿಶೀಲನೆ ನಡೆಸಿದ್ದರು.ಈ ವೇಳೆ ಮ್ಯಾಥ್ಯೂ ಅವರಿಗೆ ಸೇರಿದ NPB ರೈಫಲ್ ಪರಿಶೀಲಿಸಿದಾಗ, ರೈಫಲ್‌ಗೆ ಹೆಚ್ಚುವರಿಯಾಗಿ ಬೈನಾಕುಲರ್ ಹಾಗೂ ಟೆಲಿಸ್ಕೋಪ್ ಅಳವಡಿಸಿರುವುದು ಪತ್ತೆಯಾಗಿದೆ.ಆಯುಧ ಲೈಸೆನ್ಸ್‌ನಲ್ಲಿ ರೈಫಲ್‌ಗೆ ಟೆಲಿಸ್ಕೋಪ್ ಅಳವಡಿಸಲು ಯಾವುದೇ ಅನುಮತಿ ನೀಡಿರಲಿಲ್ಲ. ಆದರೂ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಪರವಾನಗಿ ನಿಯಮ ಉಲ್ಲಂಘಿಸಿ ರೈಫಲ್‌ಗೆ ಬೈನಾಕುಲರ್ ಹಾಗೂ ಟೆಲಿಸ್ಕೋಪ್ ಅಳವಡಿಸಿ ಮಾರ್ಪಾಡು ಮಾಡಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಶಸ್ತ್ರಾಸ್ತ್ರಗಳ ವಿಶೇಷ ತಪಾಸಣೆ – ನಾಲ್ಕು ಮಾರ್ಪಾಡು ಮಾಡಲಾದ ಶಸ್ತ್ರಾಸ್ತ್ರ ಪತ್ತೆ-ಪ್ರಕರಣ ದಾಖಲು…ಇತ್ತೀಚಿನ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ(ಫೈರ್ ಆರ್ಮ್ಸ್)ಗಳ ಬಳಕೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾದ್ಯಂತ ಶಸ್ತ್ರಾಸ್ತ್ರ ಹೊಂದಿರುವ ವ್ಯಕ್ತಿಗಳ ಹಿನ್ನೆಲೆ, ಅವರು ಹೊಂದಿರುವ ಶಸ್ತ್ರಾಸ್ತ್ರಗಳ ಸ್ಥಿತಿ ಹಾಗೂ ಅವುಗಳಲ್ಲಿ ಯಾವುದೇ ರೀತಿಯ ಅನಧಿಕೃತ ಮಾರ್ಪಾಡು ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.ಈ ವಿಶೇಷ ಕಾರ್ಯಾಚರಣೆಯು ಕಳೆದ ಒಂದು ತಿಗಳು ನಡಿದಿದ್ದು, ಈ ಸಂದರ್ಭದಲ್ಲಿ ಜಿಲ್ಲಾದ್ಯಂತ ಒಟ್ಟು 2,925 ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಲಾಗಿದ್ದು, ಅವುಗಳ ವಿವರ ಈ ಕೆಳಗಿನಂತಿವೆ:- SBML – 1,759
– SBBL – 554
– DBBL – 318
– DBML – 06
– Pistol – 120
– Revolver – 119
– Rifle – 30
– Bore Gun – 13
– NP Bore – 06ಪರಿಶೀಲನೆಯ ಸಂದರ್ಭದಲ್ಲಿ ಒಟ್ಟು 04(ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ) ಶಸ್ತ್ರಾಸ್ತ್ರಗಳಲ್ಲಿ ಅನಧಿಕೃತ ಮಾರ್ಪಾಡು ಮಾಡಿರುವುದು ಕಂಡುಬಂದಿದೆ.ಈ ಸಂಬಂಧವಾಗಿ ಶಂಕರನಾರಾಯಣ, ಕೋಟ, ಬ್ರಹ್ಮಾವರ ಹಾಗೂ ಕಾರ್ಕಳ ಟೌನ್ ಪೊಲೀಸ್ ಠಾಣೆಗಳಲ್ಲಿ, ಪ್ರತ್ಯೇಕ ಪ್ರತ್ಯೇಕ ವಾಗಿ ಶಸ್ತ್ರಾಸ್ತ್ರಗಳಲ್ಲಿ ಅನಧಿಕೃತ ಮಾರ್ಪಾಡು ಮಾಡಿದ ಆಸಾಮಿಗಳ ವಿರುದ್ಧ Indian Arms Act-1959 ರ ಕಲಂ 25ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಸದರಿ ಪ್ರಕರಣಗಳು ಪ್ರಸ್ತುತ ತನಿಖಾ ಹಂತದಲ್ಲಿವೆ.ಇದಲ್ಲದೆ, ಜಿಲ್ಲೆಯಲ್ಲಿ ರೌಡಿ ಹಾಳೆ ಹೊಂದಿರುವ ಹಾಗೂ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವ ವ್ಯಕ್ತಿಗಳ ಪ್ರಸ್ತುತ ನಡವಳಿಕೆ, ಅವರು ಶಸ್ತ್ರಾಸ್ತ್ರ ಹೊಂದಿದ ನಂತರ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ವಿಶೇಷವಾಗಿ ಪರಿಶೀಲನೆ ನಡೆಸಲಾಗಿದೆ.ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಶಸ್ತ್ರಾಸ್ತ್ರಗಳ ಅಕ್ರಮ ಬಳಕೆ ಮತ್ತು ಅನಧಿಕೃತ ಮಾರ್ಪಾಡುಗಳ ವಿರುದ್ಧ ಇದೇ ರೀತಿಯಾಗಿ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ನಿಗಾ ವಹಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.ಅಲ್ಲದೆ, ಸಾರ್ವಜನಿಕರು ಯಾವುದೇ ರೀತಿಯ ಅನಧಿಕೃತ ಶಸ್ತ್ರಾಸ್ತ್ರ ಬಳಕೆ, ಮಾರ್ಪಾಡು ಅಥವಾ ಸಂಗ್ರಹದ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ಉಡುಪಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ. ಸಂಖ್ಯೆಗಳಾದ: 08202526444,08202526709 9480805400(ವಾಟ್ಸಾಪ್ ನಂಬರ್) ಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಸಹಕರಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಮನವಿ.





