Home Crime ಬಂಟ್ವಾಳ: ಯುವತಿ ಕೊಲೆ ಪ್ರಕರಣ, ಕಾರ್ಟೂನ್‌ ಟೀಕಿಸಿದ ವ್ಯಕ್ತಿ ವಿರುದ್ಧ ಕೇಸ್‌ : ಹೈಕೋರ್ಟ್‌ ತರಾಟೆ…!!

ಬಂಟ್ವಾಳ: ಯುವತಿ ಕೊಲೆ ಪ್ರಕರಣ, ಕಾರ್ಟೂನ್‌ ಟೀಕಿಸಿದ ವ್ಯಕ್ತಿ ವಿರುದ್ಧ ಕೇಸ್‌ : ಹೈಕೋರ್ಟ್‌ ತರಾಟೆ…!!

ಬಂಟ್ವಾಳ: ಬಸ್‌ ನಿಲ್ದಾಣದಲ್ಲಿ ನಡೆದ ಯುವತಿ ಕೊಲೆ ಪ್ರಕರಣಕ್ಕೆ ಕುರಿತಂತೆ ನ್ಯೂಸ್‌ ಪೋರ್ಟಲ್‌ನಲ್ಲಿ ಬಂದಿದ್ದ ವ್ಯಂಗ್ಯಚಿತ್ರವನ್ನು ಟೀಕಿಸಿದ ವ್ಯಕ್ತಿಯ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ ಪೊಲೀಸರ ಕ್ರಮಕ್ಕೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಸರಕಾರ ಹಾಗೂ ಪೊಲೀಸರ ಈ ನಡೆಗೆ ಕಿಡಿಕಾರಿರುವ ನ್ಯಾಯಾಲಯವು, “ಕೊಲೆಗಾರರನ್ನು ಹಿಡಿಯುವುದು ಬಿಟ್ಟು, ಅವರ ಬಗ್ಗೆ ಬರೆದವರ ಮತ್ತು ಸುದ್ದಿ ಮಾಡಿದವರ ವಿರುದ್ಧ ಕೇಸ್‌ ಹಾಕುವುದೇ ಸರಕಾರದ ಕೆಲಸವಾಗಿದೆ” ಎಂದು ಖಾರವಾಗಿ ಪ್ರಶ್ನೆ ಮಾಡಿದೆ.

ಪಣಂಬೂರು ಠಾಣೆ ಪೊಲೀಸರು ತಮ್ಮ ವಿರುದ್ಧ ದಾಖಲು ಮಾಡಿದ್ದ ಎಫ್‌ಐಆರ್‌ ರದ್ದು ಮಾಡುವಂತೆ ಕೋರಿ ಮಂಗಳೂರಿನ ಕದ್ರಿ ನಿವಾಸಿ ಪ್ರದೀಪ್‌ ಸರಿಪಳ್ಳ ಅವರು ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ನೀಡಿದೆ. ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ನ್ಯಾಯಪೀಠ, ಈ ಕುರಿತು ಸ್ಪಷ್ಟನೆ ನೀಡುವಂತೆ ಪಣಂಬೂರು ಪೊಲೀಸರು ಹಾಗೂ ದೂರುದಾರ ಮೊಹಮ್ಮದ್‌ ಮುನೀಮ್‌ ಅವರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.

ನ್ಯೂಸ್‌ ಪೋರ್ಟಲ್‌ನಲ್ಲಿ ಪ್ರಕಟಗೊಂಡಿದ್ದ ಕಾರ್ಟೂನ್‌ ನನ್ನು ಟೀಕಿಸಿ ಅರ್ಜಿದಾರರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಈ ಕಾರಣಕ್ಕೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಕಾರ್ಟೂನ್‌ ಪ್ರಕಟಿಸಿದ್ದ ಮೂಲ ನ್ಯೂಸ್‌ ಪೋರ್ಟಲನ್ನು ಬಿಟ್ಟು, ಟೀಕೆ ಮಾಡಿದ ವ್ಯಕ್ತಿಯನ್ನಷ್ಟೇ ಗುರಿ ಮಾಡಿ ಕೇಸ್‌ ಮಾಡಲಾಗಿದೆ ಎಂದು ಪೀಠಕ್ಕೆ ಅರ್ಜಿದಾರರ ಪರ ವಕೀಲರು ಗಮನಕ್ಕೆ ತಂದಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಸರಕಾರಿ ಅಭಿಯೋಜಕರನ್ನು ತರಾಟೆಗೆ ತೆಗೆದುಕೊಂಡು, ಕಾರ್ಟೂನ್‌ ಪ್ರಕಟ ಮಾಡಿದವರನ್ನು ಬಿಟ್ಟು ಅದನ್ನು ಟೀಕಿಸಿದವರ ಮೇಲೆ ಮಾತ್ರ ಕೇಸ್‌ ಹಾಕಿರುವ ಪೊಲೀಸರ ದಂದ್ವ ನಿಲುವನ್ನು ಪ್ರಶ್ನೆ ಮಾಡಿದೆ. ಅರ್ಜಿದಾರರಿಗೆ ರಿಲೀಫ್‌ ನೀಡಿ ಎಫ್‌ಐಆರ್‌ಗೆ ತಡೆ ನೀಡಿದೆ.