Home Crime ಬೈಂದೂರು: ಕರ್ತವ್ಯ ಲೋಪ, ಹಣ ದುರ್ಬಳಕೆ ಆರೋಪ : ಬಾಡ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ...

ಬೈಂದೂರು: ಕರ್ತವ್ಯ ಲೋಪ, ಹಣ ದುರ್ಬಳಕೆ ಆರೋಪ : ಬಾಡ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಗಿರೀಶ್ ಮೇಸ್ತ ಅಮಾನತು…!!

ಬೈಂದೂರು : ಕರ್ತವ್ಯ ಲೋಪ ಹಾಗೂ ಶಾಲೆಯ ಸರ್ಕಾರಿ ಮತ್ತು ಸರ್ಕಾರೇತರ ಖಾತೆಗಳ ಹಣವನ್ನು ನಿಯಮಬಾಹಿರವಾಗಿ ವೆಚ್ಚ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬೈಂದೂರು ವಲಯದ ಬಾಡ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಿರೀಶ್ ಮೇಸ್ತ ಅವರನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಅಶೋಕ್ ಕಾಮತ್ ಆದೇಶ ಹೊರಡಿಸಿದ್ದಾರೆ.

ಮುಖ್ಯ ಶಿಕ್ಷಕ ಗಿರೀಶ್ ಮೇಸ್ತ ಅವರು ತಮ್ಮ ಸೇವಾವಧಿಯಲ್ಲಿ ಶಾಲೆಯ ಹಣಕಾಸು ವ್ಯವಹಾರಗಳಲ್ಲಿ ಲೋಪ ಎಸಗಿದ್ದು, ಖರ್ಚು-ವೆಚ್ಚಗಳಿಗೆ ಸಂಬಂಧಿಸಿದ ವೋಚರ್ ಹಾಗೂ ರಶೀದಿಗಳನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿ ಬೈಂದೂರಿನ ಶಿವರಾಜ್ ಎಂಬವರು ದೂರು ಸಲ್ಲಿಸಿದ್ದರು.

ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಪನಿರ್ದೇಶಕರ ಕಚೇರಿಯಿಂದ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ನಡೆಸಿದ ತನಿಖೆಯಲ್ಲಿ ಶಾಲೆಯ ಹಣಕಾಸು ವ್ಯವಹಾರ ಮತ್ತು ಆಡಳಿತಾತ್ಮಕ ನಿರ್ವಹಣೆಗೆ ಸಂಬಂಧಿಸಿದ ಹಲವು ಲೋಪಗಳು ಕಂಡುಬಂದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಾಲೆಯ ವಹಿವಾಟುಗಳಿಗೆ ಸಂಬಂಧಿಸಿದ ನಗದು ವಹಿಯನ್ನು (ಕ್ಯಾಶ್‌ಬುಕ್) ಸಮರ್ಪಕವಾಗಿ ನಿರ್ವಹಿಸದಿರುವುದು, ನೇಮಕಾತಿ ಹಾಗೂ ಖರೀದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ನಿರ್ಣಯ ಪಡೆದಿರುವ ದಾಖಲೆಗಳನ್ನು ನಿರ್ವಹಿಸದಿರುವುದು ಹಾಗೂ ಇಲಾಖೆಯಿಂದ ಬಿಡುಗಡೆಯಾದ ಅನುದಾನವನ್ನು ಖರೀದಿ ನಿಯಮಗಳನ್ನು ಉಲ್ಲಂಘಿಸಿ ವೆಚ್ಚ ಮಾಡಿರುವುದು ತನಿಖೆಯಲ್ಲಿ ಉಲ್ಲೇಖಿತ ಪ್ರಮುಖ ಲೋಪಗಳಾಗಿವೆ.

ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಕರ್ನಾಟಕ ಆರ್ಥಿಕ ಸಂಹಿತೆ ಹಾಗೂ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ (ಕೆಸಿಎಸ್‌ಆರ್) ಅಡಿಯಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಆದೇಶ ಹೊರಡಿಸಲಾಗಿದೆ. ಅಮಾನತು ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆ ನೀಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ