ಪಡುಬಿದ್ರಿ: ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಮೊಗವೀರ ಸಮಾಜದ ಗುರು ಪರಂಪರೆಯ 9ನೆಯ ಹಾಗೂ ಕೊನೆಯ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿಯ ಅನಾವರಣ ಇಂದು ಬೆಳಿಗ್ಗೆ 10ಕ್ಕೆ ಉಚ್ಚಿಲ ಮೊಗವೀರ ಭವನದಲ್ಲಿ ನಡೆಯಿತು.
ಮಾಧವ ಮಂಗಲ ಪೂಜಾರ್ಯರ 31 ಅಡಿ ಎತ್ತರದ ಕಂಚಿನ ಭವ್ಯ ಪುತ್ಥಳಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಪುತ್ಥಳಿಗೆ 14 ಸಾವಿರ ಕೆ.ಜಿ. ಕಂಚು ಬಳಸಲಾಗುತ್ತಿದೆ. ಮೊಗವೀರ ಸಮುದಾಯದವರ ಸಂಕಲ್ಪದಂತೆ ಈ ಪುತ್ಥಳಿ ನಿರ್ಮಿಸಲಾಗುತ್ತಿದೆ. ಇದು ಮೊಗವೀರ ಸಮುದಾಯದ ಏಕತೆ, ಗುರುಭಕ್ತಿ, ಗುರುಪರಂಪರೆಯ ವೈಭವವನ್ನು ಮುಂದಿನ ಪೀಳಿಗೆಗೆ ಸಾರುವ ಪ್ರಮುಖ ಪ್ರತೀಕವಾಗಲಿದೆ.
ಮೊಗವೀರ ಸಮುದಾಯದ ಪರಂಪರೆಯಲ್ಲಿ 9 ತಲೆಮಾರಿನ ಗುರುಗಳು ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. ಉದ್ಯಮಿ, ದಾನಿ ಜಿ. ಶಂಕರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಲಾಲಾಜಿ ಆರ್. ಮೆಂಡನ್,ಪ್ರಸಾದ್ ರಾಜ್ ಕಾಂಚನ್ ಸೇರಿದಂತೆ ಸಮುದಾಯದ ಪ್ರಮುಖರು, ಗಣ್ಯರು ಭಾಗವಹಿಸಿದ್ದರು.
ಮೊಗವೀರ ಸಮುದಾಯದ ಗುರಿಕಾರರು, ಸಮುದಾಯ ಬಾಂಧವರು, ಸಂಯುಕ್ತ ಸಭೆ ಹಾಗೂ ಗ್ರಾಮ ಸಭೆಗಳ ಪ್ರತಿನಿಧಿಗಳು, ವಿವಿಧ ಮಹಿಳಾ ಸಂಘಗಳ ಸದಸ್ಯರು, ವಿವಿಧ ಮೀನುಗಾರಿಕಾ ಸಂಘ– ಸಂಸ್ಥೆಗಳ ಸದಸ್ಯರು ಸೇರಿದಂತೆ ಕರಾವಳಿ ಕರ್ನಾಟಕದ ಸಮಾಜ ಬಾಂಧವರು ಭಾಗವಹಿಸಿದ್ದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.







