ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಸಾರ್ವಜನಿಕ ರಸ್ತೆಯಲ್ಲಿ ಹಾಳಾಗಿ ನಿಂತಿದ್ದ ಲಾರಿಯನ್ನು ಪರಿಶೀಲಿಸಿದಾಗ ಪರವಾನಿಗೆ ಇಲ್ಲದೆ ಅಕ್ರಮವಾಗಿ ಲ್ಯಾಟರೈಟ್ ಮಣ್ಣು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಬೈರಿಕಟ್ಟೆ ಬಳಿ ಹಾದುಹೋಗುವ ವಿಟ್ಲ-ಕನ್ಯಾನ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಘನ ವಾಹನವೊಂದು ಹಾಳಾಗಿ ನಿಂತು ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯ PSI ರಾಮಕೃಷ್ಣ ಅವರು ನ.08 ರಂದು ಮಧ್ಯಾಹ್ನ 3:30ಕ್ಕೆ ಠಾಣೆಯಿಂದ ಇಲಾಖಾ ಜೀಪಿನಲ್ಲಿ ಸ್ಥಳಕ್ಕೆ ತೆರಳಿದ್ದರು.
ಮಧ್ಯಾಹ್ನ 3:45ಕ್ಕೆ ಕಾಡುಮನೆ ಕಡೆಗೆ ಹೋಗುವ ರಸ್ತೆಯ ತಿರುವಿನಲ್ಲಿ 14 ಚಕ್ರದ ಲಾರಿ ನಿಂತಿರುವುದು ಕಂಡುಬಂದಿದೆ. ಚಾಲಕನನ್ನು ವಿಚಾರಿಸಿದಾಗ ಲಾರಿಯ ಆಕ್ಸೆಲ್ ಕಟ್ ಆಗಿ ಚಲಿಸುವ ಸ್ಥಿತಿಯಲ್ಲಿಲ್ಲದ ಕಾರಣ ನಿಲ್ಲಿಸಿರುವುದಾಗಿ ತಿಳಿಸಿದ್ದಾನೆ.
ಲಾರಿಯಲ್ಲಿರುವ ಲೋಡ್ ಬಗ್ಗೆ ವಿಚಾರಿಸಿದಾಗ ಕೆಂಪು ಲ್ಯಾಟರೈಟ್ ಮಣ್ಣು ಇರುವುದಾಗಿ ತಿಳಿಸಿದ್ದು, ಸಾಗಾಟಕ್ಕೆ ಯಾವುದೇ ಪರವಾನಿಗೆ ಇಲ್ಲ ಎಂದು ಒಪ್ಪಿಕೊಂಡಿದ್ದಾನೆ. ಲಾರಿಯ ಹಿಂದಿನ ಬಾಡಿಯನ್ನು ಪರಿಶೀಲಿಸಿದಾಗ ಕಪ್ಪು ತರಪಾಲು ಹೊದಿಸಿದ್ದು, ತೆಗೆದು ನೋಡಿದಾಗ ಕೆಂಪು ಲ್ಯಾಟರೈಟ್ ಮಣ್ಣು ಕಂಡುಬಂದಿದೆ.
ಲಾರಿ ನಂಬರ್ KA-21-C-4608. ಚಾಲಕ ಇರ್ಫಾನ್ ಪಾಷಾ, ಸಕಲೇಶಪುರ, ಹಾಸನ ಜಿಲ್ಲೆ ಎಂದು ಗುರುತಿಸಲಾಗಿದೆ. ಮಣ್ಣಿನ ಅಂದಾಜು ಮೌಲ್ಯ ರೂ. 30,000.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



