Home Kundapura News ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವಕರಿಗೆ ಕರವೇ ಎಚ್ಚರಿಕೆ : ಕ್ಷಮೆಯಾಚನೆ…!!

ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವಕರಿಗೆ ಕರವೇ ಎಚ್ಚರಿಕೆ : ಕ್ಷಮೆಯಾಚನೆ…!!

ಕುಂದಾಪುರ: ಕುಂದಾಪುರ ತಾಲ್ಲೂಕು ಆಸ್ಪತ್ರೆಗೆ ದಾಖಲೆಗಳ ವಿಚಾರವಾಗಿ ಆಗಮಿಸಿದ್ದ ಹಿಂದಿ ಭಾಷಿಕ ಯುವಕರು, ಆಸ್ಪತ್ರೆ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ.

ಕರ್ನಾಟಕ ರಕ್ಷಣಾ ವೇದಿಕೆ ಕುಂದಾಪುರ ತಾಲೂಕು ಸಾಮಾಜಿಕ ಜಾಲತಾಣ ಸಂಚಾಲಕರಿಗೆ ಲಭಿಸಿದ ಮಾಹಿತಿಯ ಮೇರೆಗೆ ಅವರು ಕುಂದಾಪುರ ತಾಲೂಕು ಅಧ್ಯಕ್ಷರಾದ ಶಿವ ಆರ್ ಪೂಜಾರಿ, ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರಾದ ಪುರುಷೋತ್ತಮ್ ಪೂಜಾರಿ ಕೊಡಪಾಡಿ ಹಾಗೂ ಕರವೇ ಉಡುಪಿ ಜಿಲ್ಲಾಧ್ಯಕ್ಷ ಅ. ರಾ. ಪ್ರಭಾಕರ್ ಪೂಜಾರಿಯವರ ಗಮನಕ್ಕೆ ತಂದರು.

ಕೂಡಲೇ ಕಾರ್ಯಪ್ರವೃತ್ತ ರಾದ ಕುಂದಾಪುರ ತಾಲೂಕು ಅಧ್ಯಕ್ಷರಾದ ಶಿವ ಆರ್. ಪೂಜಾರಿ, ಉಪಾಧ್ಯಕ್ಷರಾದ ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಮೊಗವೀರ, ಕ್ರೀಡಾ ಸಂಚಾಲಕರಾದ ಹರ್ಷವರ್ಧನ್ ಕಾರ್ವಿ ಹಾಗೂ ಸಚಿನ್ ಅವರು ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಚರ್ಚಿಸಿ, ಸಂಬಂಧಪಟ್ಟ ಯುವಕರನ್ನು ಆಸ್ಪತ್ರೆಗೆ ಕರೆಸಿಕೊಂಡರು.

ಆಸ್ಪತ್ರೆಗೆ ಆಗಮಿಸಿದ ಯುವಕರಿಗೆ ತಮ್ಮ ವರ್ತನೆಯ ಗಂಭೀರತೆಯನ್ನು ಮನವರಿಕೆ ಮಾಡಿಕೊಡಲಾಯಿತು. ಬಳಿಕ ಯುವಕರು ತಮ್ಮ ತಪ್ಪಿಗೆ ಬೇಷರತ್ತಾಗಿ ಕ್ಷಮೆಯಾಚಿಸಿದರು.

ಮುಂದಿನ ದಿನಗಳಲ್ಲಿ ಈ ರೀತಿಯ ಅಶಿಸ್ತಿನ ವರ್ತನೆ ಅಥವಾ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಸಿಬ್ಬಂದಿಗೆ ತೊಂದರೆ ನೀಡುವ ಘಟನೆಗಳು ಮರುಕಳಿಸಿದರೆ, ಕಾನೂನುಬದ್ಧವಾಗಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಎಚ್ಚರಿಕೆ ನೀಡಿದರು.