Home Crime ಪ್ರದೀಪ್ ಪೂಜಾರಿ ಸಾವು ಪ್ರಕರಣ : ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಅಧಿಕೃತವಾಗಿ ದೂರು…!!

ಪ್ರದೀಪ್ ಪೂಜಾರಿ ಸಾವು ಪ್ರಕರಣ : ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಅಧಿಕೃತವಾಗಿ ದೂರು…!!

ಉಡುಪಿ: ಪೊಲೀಸ್ ವಶದಲ್ಲಿದ್ದ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪೆರ್ಡೂರು ಸಮೀಪದ ನಾಯರಕೋಡು ನಿವಾಸಿ ಪ್ರದೀಪ್ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಗೆ ಮಧ್ಯಪ್ರವೇಶಿಸುವಂತೆ ಕೋರಿ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಅಧಿಕೃತವಾಗಿ ದೂರು ದಾಖಲಿಸಲಾಗಿದೆ.

ಶ್ರೀಕಾಂತ್ ಶೆಟ್ಟಿ ಕಾರ್ಕಳ ಆಯೋಗಕ್ಕೆ ಈ ದೂರು ಸಲ್ಲಿಸಿದ್ದು, ಆಯೋಗವು ಡೈರಿ ಸಂಖ್ಯೆ 25715/IN/2026 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಕರ್ನಾಟಕ ರಾಜ್ಯದ ಉಸ್ತುವಾರಿ ಹೊತ್ತಿರುವ ಆಯೋಗದ ಸದಸ್ಯರಿಗೂ ಈ ಬಗ್ಗೆ ಮಾಹಿತಿ ರವಾನಿಸಿದೆ.

ದೂರಿನಲ್ಲಿ ಏನಿದೆ?:

  1. ಅಪಹರಣ ಮತ್ತು ಹಲ್ಲೆ: ಪ್ರದೀಪ್ ಪೂಜಾರಿಯನ್ನು ಪ್ರಸನ್ನ ಶೆಟ್ಟಿ ಹಾಗೂ ಅವರ ಸಹಚರರು ಅಪಹರಿಸಿ, ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಮರದ ದೊಣ್ಣೆ ಹಾಗೂ ಕಬ್ಬಿಣದ ಸರಳುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
  2. ಪೊಲೀಸರ ಕರ್ತವ್ಯ ಲೋಪ: ಸ್ಥಳಕ್ಕೆ ಬಂದ ಹಿರಿಯಡ್ಕ ಠಾಣಾ ಪೊಲೀಸರು ಹಲ್ಲೆಕೋರರನ್ನು ವಶಕ್ಕೆ ಪಡೆಯುವ ಬದಲು ಗಾಯಾಳು ಪ್ರದೀಪ್‌ನನ್ನೇ ವಶಕ್ಕೆ ಪಡೆದು ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
  3. ದೂರು ದಾಖಲಿಸಲು ನಿರಾಕರಣೆ ಹಾಗೂ ಬೆದರಿಕೆ: ಹಲ್ಲೆಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲು ಪ್ರದೀಪ್ ಹಾಗೂ ಆತನ ಅಣ್ಣ ದಿಲೀಪ್ ಪೂಜಾರಿ ಮುಂದಾದಾಗ, ಹಿರಿಯಡ್ಕ ಪಿಎಸ್‌ಐ ಪುನೀತ್ ಅವರು ದೂರು ಸ್ವೀಕರಿಸಲು ನಿರಾಕರಿಸಿ ಬೆದರಿಕೆ ಹಾಕಿದ್ದರು ಎಂದು ಗಂಭೀರ ಆರೋಪ ಮಾಡಲಾಗಿದೆ.
  4. ಸೂಕ್ತ ವೈದ್ಯಕೀಯ ನೆರವು ಹಾಗೂ ಕಾನೂನು ರಕ್ಷಣೆ ಸಿಗದೆ, ಪೊಲೀಸರ ಪಕ್ಷಪಾತ ಮತ್ತು ಬೆದರಿಕೆಯಿಂದ ತೀವ್ರ ಮಾನಸಿಕ ಆಘಾತಕ್ಕೆ ಒಳಗಾದ ಪ್ರದೀಪ್, ಅಕ್ಟೋಬರ್ 30 ರಂದು ಅಜ್ಜರಕಾಡು ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
  5. ಪೊಲೀಸ್ ಕಸ್ಟಡಿಯಲ್ಲಿ ನಡೆದ ಸಾವು (Alleged Custodial Death) ಎಂಬ ವಿಭಾಗದಡಿ ದೂರು ದಾಖಲಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ.