ಮಣಿಪಾಲ : ನಿಗದಿತ ಅವಧಿ ಮೀರಿ ಗೇಮ್ಸ್ ಸೆಂಟರ್ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಜಾನೆ ಸುಮಾರು 12:45ಕ್ಕೆ ಮಣಿಪಾಲ ಅಂಬಾಗಿಲು ರಸ್ತೆಯಲ್ಲಿರುವ ಸಿಟಿ ಅರೇನಾ ಗೇಮ್ಸ್ ಸೆಂಟರ್‌ನಲ್ಲಿ ನಿಗದಿತ ಸಮಯ ಮೀರಿದ ಬಳಿಕವೂ ಗೇಮ್ಸ್‌ಗಳನ್ನು ಆಡಿಸಲಾಗುತ್ತಿತ್ತು.
ಈ ಬಗ್ಗೆ ಬಂದ ದೂರಿನ ಮೇರೆಗೆ ರಾತ್ರಿ ರೌಂಡ್ಸ್‌ನಲ್ಲಿದ್ದ ಮಣಿಪಾಲ ಠಾಣೆಯ ಎಎಸ್‌ಐ ವಿವೇಕಾನಂದ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ವೀಡಿಯೋ ದಾಖಲಿಸಿಕೊಂಡು ಗೇಮ್ಸ್ ಸೆಂಟರ್‌ನ್ನು ಮುಚ್ಚಿಸಿದರು.
ಗೇಮ್ಸ್ ಸೆಂಟರ್‌ನ ಮ್ಯಾನೇಜರ್ ಸತ್ಯಸ್ವರೂಪ ಅವರಿಗೆ ಈ ಹಿಂದೆ ಹಲವು ಬಾರಿ ನಿಗದಿತ ಸಮಯಕ್ಕೆ ಸೆಂಟರ್ ಬಂದ್ ಮಾಡುವಂತೆ ಮೌಖಿಕವಾಗಿ ಸೂಚಿಸಿದ್ದರೂ, ಅವಧಿ ಮೀರಿ ಯಾವುದೇ ಪರವಾನಿಗೆ ಇಲ್ಲದೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ವೇಳೆ ಹೊರಗಿನವರು ಮದ್ಯಪಾನ ಮಾಡಿ ಸ್ಥಳದಲ್ಲಿ ಸೇರುತ್ತಿದ್ದರಿಂದ ಶಾಂಭವಿ ಎಂಪ್ಯಾರ್, ಶಾಂಭವಿ ಹೆಬಿಟೇಜ್ ಹಾಗೂ ಗ್ರೀನ್ ಫಾರ್ಚೂನ್ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಿಗೆ ತೊಂದರೆಯಾಗಿದ್ದು, ಸಾರ್ವಜನಿಕ ಉಪದ್ರವಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



