ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿ ಫೈಜಲ್ ಎಂಬಾತ ಬೀಡಿ ಕೊಡುವಂತೆ ಒತ್ತಾಯಿಸಿ ಅಡುಗೆ ತಯಾರಿಗೆ ಅಡ್ಡಿ ಪಡಿಸಿದ ಘಟನೆ ವರದಿಯಾಗಿದೆ.
ಫೈಜಲ್ ಸೆ. 14ರಂದು ಬೆಳಗ್ಗೆ ಸುಮಾರು 8:10 ಗಂಟೆಗೆ ಅಡುಗೆ ಮನೆ ಕಡೆಗೆ ಹೋಗಿ ಪಾಕಶಾಲೆಯಲ್ಲಿ ಕೆಲಸ ಮಾಡುವ ಬಂಧಿಗಳಿಗೆ ಅಧೀಕ್ಷಕರು ಬೀಡಿ ನೀಡುವವರೆಗೂ ಅಡುಗೆ ತಯಾರಿ ಮಾಡಬಾರದು ಎಂದು ಬೆದರಿಕೆ ಹಾಕುವ ಮೂಲಕ ಮಧ್ಯಾಹ್ನದ ಅಡುಗೆ ತಯಾರಿಗೆ ಅಡಚಣೆ ಉಂಟು ಮಾಡಿದ ಎನ್ನಲಾಗಿದೆ. ಅನಂತರ ಸಹ ಬಂಧಿಗಳನ್ನು ಒಟ್ಟುಗೂಡಿಸಿ ಜೈಲು ಅಧೀಕ್ಷರ ಕಚೇರಿಗೆ ಬಂದು ನೀವು ಬೀಡಿ ಕೊಡುವರೆಗೂ ಅಡುಗೆ ತಯಾರಿಸಲು ಬಿಡುವುದಿಲ್ಲ.
ಒಂದು ವೇಳೆ ಅಡುಗೆ ತಯಾರಿಸಿದರೆ ಅದರಲ್ಲಿ ಹಲ್ಲಿ ಅಥವಾ ಜಿರಳೆ ಹಾಕಿ ಡೊಡ್ಡ ಗಲಾಟೆ ಮಾಡಿ ನಿಮ್ಮನ್ನು ವರ್ಗಾವಣೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿರುವುದಾಗಿ ಜೈಲು ಅಧೀಕ್ಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.



