ಮುರುಡೇಶ್ವರ: ಗುಂಪೊಂದು ಜಗಳವಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಗಲಾಟೆ ಬಿಡಿಸಲು ಮುಂದಾದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯ ಮೇಲೆಯೇ ಚಾಕುವಿನಿಂದ ದಾಳಿ ನಡೆಸಿರುವ ಘಟನೆ ಶನಿವಾರ ತಡರಾತ್ರಿ ಮುರುಡೇಶ್ವರದಲ್ಲಿ ನಡೆದಿದೆ.
ರಾತ್ರಿ ಸುಮಾರು 11.45ರಿಂದ 12 ಗಂಟೆ ವೇಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿರುವ ಪ್ರಜಾ ಜ್ಯೂಸ್ ಸೆಂಟರ್ ಎದುರು ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಾಹಿತಿ ತಿಳಿದು ಕರ್ತವ್ಯದಲ್ಲಿದ್ದ ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್‌ಟೇಬಲ್ ವಿನಾಯಕ್ ಶೆಟ್ಟಿ ಸ್ಥಳಕ್ಕೆ ತೆರಳಿ ಜಗಳ ಬಿಡಿಸಲು ಮುಂದಾಗಿದ್ದರು.
ಈ ವೇಳೆ ರಾಜು ನಾಯ್ಕ, ಪೃಥ್ವಿಕ್ ನಾಯ್ಕ, ಮದನ ನಾಯ್ಕ, ಯೋಗೇಶ ನಾಯ್ಕ, ದರ್ಶನ ಹಾಗೂ ಇತರರು ಗಲಾಟೆಯಲ್ಲಿ ತೊಡಗಿದ್ದರು ಎನ್ನಲಾಗಿದೆ. ಪೊಲೀಸರು ಗಲಾಟೆ ನಿಯಂತ್ರಿಸಲು ಮುಂದಾದಾಗ ಆರೋಪಿಗಳು ಏಕಾಏಕಿ ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಚಾಕು ಇರಿತದಿಂದ ಇಬ್ಬರು ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆಯಲ್ಲಿ ಗಾಯಗೊಂಡ ಮನೋಜ್‌ಗೆ ಮುರುಡೇಶ್ವರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಐವರು ಸೇರಿದಂತೆ ಇತರರ ವಿರುದ್ಧ ಪ್ರಕರಣ
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಹಾಗೂ ಅಕ್ರಮವಾಗಿ ಗುಂಪುಗೂಡಿದ ಆರೋಪದಡಿ ರಾಜು ನಾಯ್ಕ, ಪೃಥ್ವಿಕ್ ನಾಯ್ಕ, ಮದನ ನಾಯ್ಕ, ಯೋಗೇಶ ನಾಯ್ಕ, ದರ್ಶನ ಹಾಗೂ ಇತರರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ವಶಕ್ಕೆ; ಉಳಿದವರಿಗಾಗಿ ಶೋಧ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




