Home Crime ಬೆಳಗಾವಿ : ಗ್ರಾ. ಪಂ ಕಚೇರಿಯೊಳಗೆ ತಂದೆ, ಮಗಳನ್ನು ಕೊಚ್ಚಿ ಕೊಲೆ…!!

ಬೆಳಗಾವಿ : ಗ್ರಾ. ಪಂ ಕಚೇರಿಯೊಳಗೆ ತಂದೆ, ಮಗಳನ್ನು ಕೊಚ್ಚಿ ಕೊಲೆ…!!

ಬೆಳಗಾವಿ : ಆಸ್ತಿ ಹಂಚಿಕೆ ವಿಚಾರದಲ್ಲಿ ಉಂಟಾದ ತೀವ್ರ ಮನಸ್ತಾಪದಿಂದಾಗಿ ಗ್ರಾಮ ಪಂಚಾಯತಿ ಕಚೇರಿಗೆ ಅರ್ಜಿ ಸಲ್ಲಿಸಲು ಬಂದಿದ್ದ ತಂದೆ ಹಾಗೂ ಮಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಾವಿಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಧಾರವಾಡ ನಿವಾಸಿ, 67 ವರ್ಷದ ಮಾಜಿ ಯೋಧ ರುದ್ರಪ್ಪ ಕುಂದರಗಿ ಹಾಗೂ ಅವರ 26 ವರ್ಷದ ಪುತ್ರಿ ಶಶಿಕಲಾ ಕುಂದರಗಿ ಕೊಲೆಯಾದ ದುರ್ದೈವಿಗಳು.

ಮೃತ ರುದ್ರಪ್ಪ ಹಾಗೂ ಅವರ ಸಹೋದರರಾದ ಬಸಪ್ಪ ಕುಂದರಗಿ ಮತ್ತು ಸಂಗಪ್ಪ ಕುಂದರಗಿ ನಡುವೆ ಜಮೀನು ಹಂಚಿಕೆ ಸಂಬಂಧ ತೀವ್ರ ಜಗಳ ನಡೆಯುತ್ತಿತ್ತು. ಒಟ್ಟು 38 ಗುಂಟೆ ಆಸ್ತಿಯು ರುದ್ರಪ್ಪ ಅವರ ಹೆಸರಿನಲ್ಲಿದ್ದು, ಇದನ್ನು ಮೂವರು ಸಹೋದರರಿಗೆ ಸಮನಾಗಿ ಹಂಚಿಕೆ ಮಾಡುವಂತೆ ನ್ಯಾಯಾಲಯ ಈಗಾಗಲೇ ಆದೇಶ ಹೊರಡಿಸಿತ್ತು. ಆದರೆ, ರುದ್ರಪ್ಪ ಅವರು ತಮಗೆ ಬರಬೇಕಾದ ಪಾಲಿನ ಜಮೀನನ್ನು ಮುಂಚಿತವಾಗಿಯೇ ಮಾರಾಟ ಮಾಡಿಕೊಂಡಿದ್ದರು.

ಆದರೂ ಉಳಿದ ಜಮೀನಿನಲ್ಲೂ ತಮಗೆ ಮತ್ತೆ ಪಾಲು ಬೇಕು ಎಂದು ಪಟ್ಟು ಹಿಡಿದಿದ್ದರಂತೆ. ಇದರಿಂದ ಸಹೋದರರ ನಡುವೆ ಆಕ್ರೋಶ ಹೆಚ್ಚಾಗಿತ್ತು ಎಂದು ಹೇಳಲಾಗಿದೆ. ನಿನ್ನೆ ಆಸ್ತಿ ಪಾಲು ಮಾಡುವ ಸಂಬಂಧ ಅರ್ಜಿ ಸಲ್ಲಿಸಲು ರುದ್ರಪ್ಪ ಹಾಗೂ ಅವರ ಪುತ್ರಿ ಶಶಿಕಲಾ ಅವರು ಅವರಾದಿ ಗ್ರಾಮ ಪಂಚಾಯತಿ ಕಚೇರಿಗೆ ಆಗಮಿಸಿದ್ದರು. ಈ ವಿಷಯ ತಿಳಿದು ಕಚೇರಿಗೆ ಧಾವಿಸಿದ ಸಹೋದರರಾದ ಬಸಪ್ಪ ಮತ್ತು ಸಂಗಪ್ಪ, ಪಂಚಾಯತಿ ಕಚೇರಿಯ ಒಳಗಡೆಯೇ ರುದ್ರಪ್ಪ ಹಾಗೂ ಶಶಿಕಲಾ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ದಾಳಿ ನಡೆಸಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.