ಪಣಂಬೂರು: ಕಸಬಾ ಬೆಂಗ್ರೆಯಲ್ಲಿ ನೀರಿಗೆ ಬಿದ್ದ ಚೆಂಡು ತರಲು ಹೋಗಿದ್ದ ಯುವಕನೋರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.
ಮೃತ ಯುವಕನನ್ನು ಕಸಬಾ ಬೆಂಗ್ರೆ ನಿವಾಸಿ ಅಬೂಸಾಲಿ ಎಂಬವರ ಪುತ್ರ ಸನಾವುಲ್ಲಾ (25) ಎಂದು ಗುರುತಿಸಲಾಗಿದೆ.
ಕಸಬಾ ಬೆಂಗ್ರೆ ಬಳಿಯ ಮೈದಾನದಲ್ಲಿ ಬಾಲಕರು ಫೂಟ್ ಬಾಲ್ ಆಟವಾಡುತ್ತಿದ್ದರು. ಈ ಸಂದರ್ಭ ಚೆಂಡು ನದಿಗೆ ಬಿದ್ದಿದ್ದು, ಅದನ್ನು ತರಲು ಸನಾವುಲ್ಲಾ ನದಿಗೆ ಇಳಿದಿದ್ದು, ನದಿಯ ಆಳ ತಿಳಿಯದೇ ಹೋದ ಯುವಕ ನದಿಯಲ್ಲಿ ಮುಳುಗಿದ್ದಾನೆ ಎಂದು ತಿಳಿದು ಬಂದಿದೆ.
ಕೂಡಲೇ ನದಿಗೆ ಇಳಿದ ಸ್ಥಳೀಯರು ನದಿಯಲ್ಲಿದ್ದ ಯುವಕನನ್ನು ಮೇಲಕ್ಕೆತ್ತಿ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಅದಾಗಲೇ ಯುವಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.




