ಪಡುಬಿದ್ರಿ: ಉಚ್ಚಿಲ ಮಸೀದಿ ಬಳಿಯ ಯುಟರ್ನ್‌ನಲ್ಲಿ ಆಟೋ ರಿಕ್ಷಾ ಹಾಗೂ ಆಕ್ಟಿವಾ ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ದಂಪತಿ ಹಾಗೂ 6 ವರ್ಷದ ಬಾಲಕ ಗಾಯಗೊಂಡ ಘಟನೆ ಸೆಪ್ಟೆಂಬರ್ 13ರಂದು ಮಧ್ಯಾಹ್ನ ನಡೆದಿದೆ.
ಸಾಲಿಗ್ರಾಮದಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಪವಿತ್ರ (28) ಅವರು ತಮ್ಮ ಪತಿ ಸುರೇಶ್ ಕೆ. ಪೂಜಾರಿ ಹಾಗೂ 6 ವರ್ಷದ ಮಗ ಕೃಷವ್ ಅವರೊಂದಿಗೆ KA-20-HF-2221 ಸಂಖ್ಯೆಯ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಮಧ್ಯಾಹ್ನ ಸುಮಾರು 12 ಗಂಟೆಗೆ ಬಡಾ ಗ್ರಾಮದ ಉಚ್ಚಿಲ ಮಸೀದಿ ಬಳಿಯ ಯುಟರ್ನ್ ಬಳಿ ತಲುಪಿದಾಗ, ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ KA-19-HF-2221 ಸಂಖ್ಯೆಯ ಆಟೋ ರಿಕ್ಷಾವನ್ನು ಚಾಲಕ ಗೌರೀಶ್ ಅವರು ಏಕಾಏಕಿ ಯುಟರ್ನ್ ತೆಗೆದುಕೊಳ್ಳುವ ವೇಳೆ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಅಪಘಾತದಲ್ಲಿ ಪವಿತ್ರ ಅವರ ಹಣೆಯ ಬಲಭಾಗ, ಬಲಕೈ ಹಾಗೂ ಬಲಕಾಲಿಗೆ ಗಾಯಗಳಾಗಿವೆ. ಸುರೇಶ್ ಅವರ ಬಲಕೈ ಮಣಿಗಂಟು, ಕಿರುಬೆರಳು ಹಾಗೂ ಬಲಕಾಲಿಗೆ ರಕ್ತಗಾಯಗಳಾಗಿವೆ. 6 ವರ್ಷದ ಕೃಷವ್ ಅವರ ಗಲ್ಲ ಹಾಗೂ ಎಡಕೈಗೆ ತರಚಿದ ಗಾಯಗಳಾಗಿವೆ.
ಗಾಯಗೊಂಡ ಪವಿತ್ರ ಹಾಗೂ ಕೃಷವ್ ಅವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿದ್ದು, ಸುರೇಶ್ ಅವರನ್ನು ಒಳರೋಗಿಯಾಗಿ ದಾಖಲಿಸಲಾಗಿದೆ.
ಘಟನೆ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2026ರಂತೆ BNS ಕಲಂ 281, 125(a) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



