ಕುಂದಾಪುರ : ರೈಲು ಪ್ರಯಾಣದ ವೇಳೆ ನಿದ್ರೆಯಲ್ಲಿದ್ದ ಮಹಿಳೆಯ ಚೂಡಿದಾರ್ ಜೇಬಿನಲ್ಲಿದ್ದ ಬರೋಬ್ಬರಿ 12 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ಮಂಗಳೂರು-ಕುಂದಾಪುರ ರೈಲು ಮಾರ್ಗದಲ್ಲಿ ಸಂಭವಿಸಿದೆ. ಕೇರಳ ರಾಜ್ಯದ ಕಾಸರಗೋಡು ನಿವಾಸಿ ಬೆನ್ನಿ ಥಾಮಸ್ ಎಂಬುವರು ನೀಡಿದ ದೂರಿನನ್ವಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.
ದೂರುದಾರ ಬೆನ್ನಿ ಥಾಮಸ್ ಅವರು ಜೂನ್ 6, 2026 ರಂದು ರಾತ್ರಿ ಸುಮಾರು 21:30 ಗಂಟೆಗೆ (9:30) ಮಂಗಳೂರಿನಿಂದ ಮಡ್ಯಾಂವ್‌ಗೆ ಚಲಿಸುವ ರೈಲು ಸಂಖ್ಯೆ 12617 ರ (ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್) ಬೋಗಿಯಲ್ಲಿ ಕುಟುಂಬಸಮೇತರಾಗಿ ರೈಲು ಹತ್ತಿದ್ದರು. ದೂರುದಾರರ ಪತ್ನಿಯು ಸೀಟ್ ಸಂಖ್ಯೆ 7ರ ಪಕ್ಕದಲ್ಲಿದ್ದು, ಪ್ರಯಾಣದ ವೇಳೆ ಗಾಢ ನಿದ್ರೆಯಲ್ಲಿದ್ದರು.
ರೈಲು ನಿಲ್ದಾಣವೊಂದರಲ್ಲಿ ನಿಂತಾಗ ಪ್ರಯಾಣಿಕರು ಇಳಿಯಲು ಓಡಾಡುತ್ತಿದ್ದ ಸಮಯವನ್ನು ಬಳಸಿಕೊಂಡ ಅಪರಿಚಿತ ಕಳ್ಳನು, ನಿದ್ರೆಯಲ್ಲಿದ್ದ ಮಹಿಳೆಯ ಚೂಡಿದಾರ್ ಜೇಬಿಗೆ ಕೈಹಾಕಿ ಚೈನ್ ಕದ್ದಿದ್ದಾನೆ. ರೈಲು ಚಲಿಸಲು ಆರಂಭಿಸುತ್ತಿದ್ದಂತೆ ಎಚ್ಚರಗೊಂಡ ಪತ್ನಿ ಪರಿಶೀಲಿಸಿದಾಗ ಜೇಬಿನಲ್ಲಿದ್ದ ಸುಮಾರು 12 ಗ್ರಾಂ ತೂಕದ, 1.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಈ ವಿಷಯವನ್ನು ಪತಿಗೆ ತಿಳಿಸಿದ್ದು, ಅಷ್ಟರಲ್ಲಾಗಲೇ ರೈಲು ಕುಂದಾಪುರ ನಿಲ್ದಾಣವನ್ನು ದಾಟಿ ಮುಂದೆ ಸಾಗಿತ್ತು. ಈ ಕೃತ್ಯದ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 49/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305(C) ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



